ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಮುಂಗಡ ಪತ್ರ ಮಂಡನೆಗೆ ಸಜ್ಜಾಗುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ಅತಿಹೆಚ್ಚು ಬಜೆಟ್ ಮಂಡಿಸಿದ ವಿತ್ತ ಸಚಿವರು ಯಾರು ಗೊತ್ತೇ?
ಮಾಜಿ ಪ್ರಧಾನಿ ಹಾಗೂ ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಒಟ್ಟು 10 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಹಣಕಾಸು ಸಚಿವ ಸ್ಥಾನದ ಜೊತೆ-ಜೊತೆಗೆ ಕೇಂದ್ರ ಗೃಹ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಅತ್ಯಧಿಕ ಆಯವ್ಯಯ ಮಂಡನೆ ಮಾಡಿದ್ದ ಹಣಕಾಸು ಸಚಿವರಲ್ಲಿ ಪಿ. ಚಿದಂಬರಂ ಅವರಿಗೆ ಎರಡನೇ ಸ್ಥಾನವಿದ್ದು, ಅವರು ಒಟ್ಟು 9 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ 2004ರಲ್ಲಿ ಸಚಿವರಾಗಿ ಮುಂದೆ 2008ರವರೆಗೆ ಗೃಹ ಸಚಿವರಾಗಿದ್ದರು. 2012ರಲ್ಲಿ ಮತ್ತೆ ಹಣಕಾಸು ಖಾತೆಗೆ ಬಂದರು.
ಅತ್ಯಧಿಕ ಬಜೆಟ್ ಮಂಡಿಸಿದ್ದ ಇತರ ಸಚಿವರುಗಳು
:
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ 8 ಬಾರಿ, ಯಶವಂತರಾವ್ ಹಾಗೂ ಸಿ.ಡಿ ದೇಶಮುಖ್ ಅವರು ತಲಾ ಏಳು ಬಾರಿ ಬಜೆಟ್ ಮಂಡಿಸಿದ್ದಾರೆ. ಡಾ. ಮನಮೋಹನ್ ಸಿಂಗ್ ಅವರು 6 ಬಾರಿ ಮುಂಗಡ ಪತ್ರ ಮಂಡಿಸಿದ್ದಾರೆ.