ನವದೆಹಲಿ: ಕೇಂದ್ರ ಆದಾಯ ತೆರಿಗೆ ಇಲಾಖೆ ಕಪ್ಪು ಹಣ ನಿಯಂತ್ರಣ ಕಾಯ್ದೆಯಡಿ 2019ರ ಮೇ 30ರವರೆಗೆ 384 ಕಾಳಧನಿಕರಿಗೆ ನೋಟಿಸ್ ನೀಡಿದೆ ಎಂದು ತಿಳಿಸಿದೆ.
ರಾಜ್ಯಸಭೆಯಲ್ಲಿ ಮಾತನಾಡಿದ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್, ಕಪ್ಪು ಹಣ ಕಾಯ್ದೆ (ಅಘೋಷಿತ ವಿದೇಶಿ ಆದಾಯ ಮತ್ತು ಸ್ವತ್ತು) ಕಾಯ್ದೆಯಡಿ ಮೇ 30ರವರೆಗೆ 384 ಜನರನ್ನು ಪತ್ತೆಹಚ್ಚಲಾಗಿದೆ. ₹ 12,260 ಕೋಟಿಯಷ್ಟು ಹಣಕ್ಕೆ ವಿವರಣೆ ಕೇಳಿ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.
ಸ್ವಿಸ್ ಬ್ಯಾಂಕ್ಗಳಲ್ಲಿ ಭಾರತೀಯರು ಇರಿಸಿರುವ ಠೇವಣಿ ಬಗ್ಗೆ ಯಾವುದೇ ಡೇಟಾವನ್ನು ಸರ್ಕಾರ ನಿರ್ವಹಿಸುವುದಿಲ್ಲ. ಇತ್ತೀಚಿನ ಕೆಲವು ಮಾಧ್ಯಮ ವರದಿಗಳು ಪ್ರಕಾರ 2018ರಲ್ಲಿ ಠೇವಣಿಯ ಮೊತ್ತ ಶೇ 6ರಷ್ಟು ಕಡಿಮೆ ಆಗಿದೆ ಎಂದು ತಿಳಿಸಿದರು.
ಆದಾಯ ತೆರಿಗೆ ಇಲಾಖೆಯು ಇದುವರೆಗೆ 8,460 ಕೋಟಿ ರೂ.ಗೂ ಹೆಚ್ಚಿನ ಕಪ್ಪು ಹಣ ಆದಾಯ ತೆರಿಗೆ ವ್ಯಾಪ್ತಿಗೆ ತಂದಿದೆ. ವಿದೇಶಿ ಬ್ಯಾಂಕ್ಗಳಲ್ಲಿ ಇರಿಸಿರುವ ಠೇವಣಿ ಮೊತ್ತದ ಮೇಲೆ ₹ 1,290 ಕೋಟಿ ದಂಡವನ್ನು ಸಂಗ್ರಹಿಸಿದೆ. 204 ಪ್ರಕರಣಗಳನ್ನು ದಾಖಲಿಸಿಕೊಂಡಿದೆ ಎಂದು ರಾಜ್ಯಸಭೆ ತಿಳಿಸಿದರು.
ಪನಾಮ ಪೇಪರ್ ಲೀಕ್ಸ್ ತನಿಖೆಯಿಂದಾಗಿ ₹ 1,500 ಕೋಟಿಯಷ್ಟು ಅಘೋಷಿತ ವಿದೇಶಿ ಹೂಡಿಕೆ ಬಹಿರಂಗವಾಗಿದೆ. ತೆರಿಗೆ ಇಲಾಖೆಯಿಂದ ಸುಮಾರು 34 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಠಾಕೂರ್ ಹೇಳಿದರು.