ಮುಂಬೈ: ಸಾಲ ನೀಡುವಲ್ಲಿ ವಿವೇಕಯುತವಾಗಿರಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು ದೇಶದ ಬ್ಯಾಂಕ್ಗಳಿಗೆ ಸೂಚಿಸಿದ್ದಾರೆ.
ಮಿಂಟ್ ವಾರ್ಷಿಕ ಬ್ಯಾಂಕಿಂಗ್ ಸಮಾವೇಶದಲ್ಲಿ ಮಾತನಾಡಿದ ಅವರು, ಸಾಲ ನೀಡುವಾಗ ಮೌಲ್ಯಮಾಪನದ ಗುಣಮಟ್ಟ ಮುಖ್ಯ. ಭಾರತದಲ್ಲಿನ ಬ್ಯಾಂಕ್ಗಳು ತೀವ್ರವಾದ ಅನುತ್ಪಾದಕ ಆಸ್ತಿಯ (ಎನ್‌ಪಿಎ) ಸಮಸ್ಯೆಯನ್ನು ಎದುರಿಸುತ್ತಿವೆ. ಸಾಲ ನೀಡುವಲ್ಲಿ ವಿವೇಕಯುತವಾಗಿರಬೇಕು ಎಂದು ಬ್ಯಾಂಕ್ಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಹಣಕಾಸು ಸಚಿವಾಲಯದ ಮಾಹಿತಿ ಪ್ರಕಾರ, 2019ರ ಸೆಪ್ಟಂಬರ್ 30ರ ವೇಳೆಗೆ ದೇಶದ ಸಾರ್ವಜನಿಕ ವಲಯದ ಬ್ಯಾಂಕ್ಗಳ ಎನ್‌ಪಿಎ ಪ್ರಮಾಣ ₹ 7.27 ಲಕ್ಷ ಕೋಟಿಯಷ್ಟಿದೆ ಎಂದು ತಿಳಿಸಿದೆ.
2017-18ನೇ ಸಾಲಿನ ಅಂತ್ಯದಲ್ಲಿ ಸುಮಾರು 9 ಲಕ್ಷ ಕೋಟಿ ರೂ. ಎನ್‌ಪಿಎಗೆ ಹೋಲಿಸಿದರೇ ಈಗಿನ ಪ್ರಮಾಣ ಇಳಿಕೆ ಆಗಿದ್ದರೂ ವಿಶ್ವದ ಉದಯೋನ್ಮುಖ ಆರ್ಥಿಕತೆಗಳ ಮುಂದೆ ಇದು ಹೆಚ್ಚಿನದಾಗಿದೆ. ಸಾಲದ ಬೆಳವಣಿಗೆಯನ್ನು ನಿಧಾನಗೊಳಿಸುವುದು ಹೇಗೆ ಎಂಬುದು ಬ್ಯಾಂಕ್ಗಳು ಪ್ರಸ್ತುತ ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ ಎಂದು ದಾಸ್ ಹೇಳಿದರು.
ಕ್ರೆಡಿಟ್ ಬೇಡಿಕೆಯನ್ನು ಹೆಚ್ಚಿಸುವ ಪ್ರಯತ್ನವಾಗಿ ಆರ್‌ಬಿಐ ಪ್ರಮುಖ ನೀತಿ ರೆಪೊ ದರವನ್ನು 2019ರಲ್ಲಿ ಶೇ 1.35ರಷ್ಟು ಕಡಿಮೆ ಮಾಡಿದೆ. ರೆಪೊ ದರವು ಸೆಂಟ್ರಲ್ ಬ್ಯಾಂಕ್, ತನ್ನ ಅಧಿನ ಬ್ಯಾಂಕ್ಗಳಿಗೆ ನೀಡುವ ಅಲ್ಪಾವಧಿಯ ಸಾಲ ದರ ಸೂಚಕ. ಇದು ಬ್ಯಾಂಕ್ ಗ್ರಾಹಕರಿಗೆ ಸಾಲ ನೀಡುವ ಬಡ್ಡಿ ದರ ನಿರ್ಧರಿಸುತ್ತದೆ.
ಎನ್‌ಬಿಎಫ್‌ಸಿಗಳ ಕುರಿತು ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಸಣ್ಣ ಎನ್‌ಬಿಎಫ್‌ಸಿಗಳಿಗೆ ಸಾಲದ ಹರಿವು ಸುಧಾರಿಸಿದೆ. ಸಾಲದ ಹರಿವು ಸ್ಥಿರವಾಗಿದೆ ಮತ್ತು ಸ್ಥಿರ ಸುಧಾರಣೆಯನ್ನು ತೋರಿಸುತ್ತಿದೆ. ಅಗ್ರ 50 ಬ್ಯಾಂಕೇತರ ಹಣಕಾಸು ಕಂಪನಿಗಳನ್ನು (ಎನ್‌ಬಿಎಫ್‌ಸಿ) ಬಹಳ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.