ನವದೆಹಲಿ: 10-ಕೇಂದ್ರೀಯ ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಬುಧವಾರ ಕರೆ ನೀಡಿದ್ದು, ಸಾರ್ವಜನಿಕ ವಲಯದ ಬ್ಯಾಂಕ್ಗಳ ಬ್ಯಾಂಕಿಂಗ್ ಸೇವೆಗಳ ಮೇಲೆ ಅಡ್ಡ ಪರಿಣಾಮ ಬೀರಲಿದೆ.
ಠೇವಣಿ, ವಿತ್ಡ್ರಾ, ಚೆಕ್ ಕ್ಲಿಯರಿಂಗ್ ಸೇರಿ ಇತರ ಬ್ಯಾಂಕಿಂಗ್ ಸೇವೆಗಳಿಗೆ ನಾಳೆ ನಡೆಯುವ ಮುಷ್ಕರದಿಂದಾಗಿ ತೊಂದರೆಯಾಗಲಿದ್ದು, ಈ ಕುರಿತು ಈಗಾಗಲೇ ಷೇರು ವಿನಿಮಯ ಕೇಂದ್ರಗಳಿಗೆ ಕೆಲ ಬ್ಯಾಂಕ್ಗಳು ಮಾಹಿತಿ ನೀಡಿವೆ.
ಎಐಬಿಇಎ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ), ಬಿಇಎಫ್‌ಐ, ಐಎನ್‌ಬಿಇಎಫ್, ಐಎನ್‌ಬಿಒಸಿ ಮತ್ತು ಬ್ಯಾಂಕ್ ಕರ್ಮಚಾರಿ ಸೇನಾ ಮಹಾಸಂಘ (ಬಿಕೆಎಸ್‌ಎಂ) ಸೇರಿದಂತೆ ವಿವಿಧ ಬ್ಯಾಂಕ್ ನೌಕರರ ಸಂಘಗಳು ಮುಷ್ಕರದಲ್ಲಿ ಭಾಗವಹಿಸಲು ಇಚ್ಛೆ ವ್ಯಕ್ತಪಡಿಸಿವೆ. ಇನ್ನು ಖಾಸಗಿ ಬ್ಯಾಂಕ್ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
ಜನವರಿ 2 ರಂದು ನಡೆದ ಸಭೆಯಲ್ಲಿ ಕಾರ್ಮಿಕರ ಬೇಡಿಕೆಗಳಿಗೆ ಭರವಸೆ ನೀಡುವಲ್ಲಿ ಕಾರ್ಮಿಕ ಸಚಿವಾಲಯ ವಿಫಲವಾಗಿದ್ದು, ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ, ಜನ ವಿರೋಧಿ ಹಾಗೂ ರಾಷ್ಟ್ರ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ ಎಂದು ಆರೋಪಿಸಿ ನಾಳೆ 10-ಕೇಂದ್ರೀಯ ಕಾರ್ಮಿಕ ಸಂಘಟನೆಗಳು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಇನ್ನು ಮುಷ್ಕರದಲ್ಲಿ 25 ಕೋಟಿ ಜನರು ಭಾಗವಹಿಸುವ ನಿರೀಕ್ಷೆ ಇದೆ.