ನವದೆಹಲಿ: ಲಡಾಖ್‌ನಲ್ಲಿ ಚೀನಾ ಮುಖಾಮುಖಿ ಸಂಘರ್ಷಕ್ಕೆ ಇಳಿದಿದೆ. ಈ ಹಿನ್ನೆಲೆ ಟೆಂಡರ್ ಪ್ರಕ್ರಿಯೆಯಲ್ಲಿ ಚೀನಾ ಸಂಸ್ಥೆಗಳನ್ನು ನಿಷೇಧಿಸುವಂತೆ ಸ್ವದೇಶಿ ಜಾಗರಣ ಮಂಚ್ ಕೇಂದ್ರವನ್ನು ಒತ್ತಾಯಿಸಿದೆ.
ಆರ್ಥಿಕ ಸಮಸ್ಯೆಗಳನ್ನು ನಿಭಾಯಿಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗಸಂಸ್ಥೆಯಾದ ಸ್ವದೇಶಿ ಜಾಗರಣ ಮಂಚ್, ದೆಹಲಿ-ಮೀರತ್ ನಡುವೆ ಕ್ಷಿಪ್ರ ಸಾರಿಗೆ ವ್ಯವಸ್ಥೆ ಯೋಜನೆಯ ಟನಲ್ ನಿರ್ಮಿಸಲು ಚೀನಾದ ಶಾಂಘೈ ಟನಲ್ ಎಂಜಿನಿಯರಿಂಗ್ ಕಂಪನಿಯ ಮಾಡಿದ್ದ ಬಿಡ್ ರದ್ದತಿಗೆ ಆಗ್ರಹಿಸಿದೆ.
ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಭಾರತೀಯರಿಗೆ ಮನವಿ ಮಾಡಿರುವ ಮಂಚ್, ಚೀನಾದ ಸರಕುಗಳ ಆಮದು ನಿಷೇಧ ಮತ್ತು ಭಾರತದಲ್ಲಿ ಮಾರಾಟವಾಗುವ ಚೀನಾ ನಿರ್ಮಿತ ಉತ್ಪನ್ನಗಳಿಗೆ ಹೆಚ್ಚುವರಿ ಸೆಸ್ ವಿಧಿಸುವಂತೆ ಒತ್ತಾಯಿಸಿದೆ.
ಹುತಾತ್ಮರಾದ ಭಾರತೀಯ ಸೈನಿಕರಿಗೆ ನಿಜವಾದ ಗೌರವ ಸಲ್ಲಿಸಬೇಕಾದರೇ ಚೀನಾದ ಉತ್ಪನ್ನಗಳ ಪ್ರಚಾರ ಕೈಡುವಂತೆ ಭಾರತೀಯ ನಟರು, ಕ್ರೀಡಾಪಟುಗಳು ಮತ್ತು ಇತರರಿಗೆ ಮನವಿ ಮಾಡುತ್ತಿದ್ದೇನೆ ಎಂದು ಮಂಚ್ ಸಹ-ಸಂಚಾಲಕ ಅಶ್ವನಿ ಮಹಾಜನ್ ತಿಳಿಸಿದರು.
ಮಹಾರಾಷ್ಟ್ರ ಸರ್ಕಾರ ಮತ್ತು ಚೀನಾದ ಆಟೋ ಕಂಪನಿಯ ನಡುವೆ ಇತ್ತೀಚೆಗೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಗೊಳಿಸಬೇಕು ಎಂದು ಮಹಾಜನ್ ಒತ್ತಾಯಿಸಿದರು.