ನವದೆಹಲಿ: ನವೆಂಬರ್ ತಿಂಗಳಲ್ಲಿ ವಾಹನೋದ್ಯಮ ಮತ್ತೆ ಕುಸಿತದತ್ತ ಸಾಗಿದೆ. ಪ್ರಯಾಣಿಕ ವಾಹನಗಳ ಮಾರಾಟ ಸೇರಿದಂತೆ ದ್ವಿಚಕ್ರ ವಾಹನಗಳವರೆಗೆ ಎಲ್ಲಾ ವಲಯಗಳಲ್ಲೂ ಹಿನ್ನೆಡೆ ಉಂಟಾಗಿದೆ.
2018-19ರ ಏಪ್ರಿಲ್-ನವೆಂಬರ್ ಅವಧಿಯಲ್ಲಿ 2,19,37,557 ವಾಹನಗಳು ಉತ್ಪಾದನೆಯಾಗಿದ್ದರೆ, ಈ ವರ್ಷದ ಇದೇ ಅವಧಿಯಲ್ಲಿ 1,89,20,298 ಯೂನಿಟ್ಗಳು ತಯಾರಾಗಿದ್ದು, ಶೇ 13.75ರಷ್ಟು ಇಳಿಕೆ ಕಂಡು ಬಂದಿದೆ. ಇದರಲ್ಲಿ ದೇಶಿ ಮಾರಾಟ ಶೇ 15.95ರಷ್ಟು ಇಳಿಯಾಗಿದ್ದು, 2018ರಲ್ಲಿ 1,86,86,895 ವಾಹನಗಳು ಮಾರಾಟ ಆಗಿದ್ದರೆ ಪ್ರಸಕ್ತ ವರ್ಷದಲ್ಲಿ 1,57,05,447 ಯೂನಿಟ್ಗಳು ಖರೀದಿ ಆಗಿವೆ. ಸಾಗರೋತ್ತರ ರಫ್ತಿನಲ್ಲಿ ಅಲ್ಪ (ಶೇ 3.28) ಏರಿಕೆ ಆಗಿದೆ. 2018ರಲ್ಲಿ 31,53,760 ವಾಹನಗಳು ರಫ್ತಾಗಿದ್ದರೆ 2019ರಲ್ಲಿ 32,57,188 ವಾಹನಗಳು ರವಾನೆ ಆಗಿವೆ.
ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಶೇ 17.98ರಷ್ಟು ಇಳಿಕೆ ಕಂಡಿದ್ದು, 2018ರಲ್ಲಿ 15,34,680 ಕಾರುಗಳಿಗೆ ಪ್ರತಿಯಾಗಿ ಈ ವರ್ಷ ಇದೇ ವೇಳೆ 11,49,112 ಮಾರಾಟವಾಗಿವೆ. ಕಾರುಗಳ ಮಾರಾಟ ಶೇ 25.12ರಷ್ಟು ಕ್ಷೀಣಿಸಿದೆ. ದ್ವಿಚಕ್ರ ವಾಹನಗಳಲ್ಲಿ ಶೇ 15.74, ತ್ರಿಚಕ್ರ ಶೇ 4.97 ಹಾಗೂ ವಾಣಿಜ್ಯ ವಾಹನಗಳ ಶ್ರೇಣಿಯಲ್ಲಿ ಶೇ 22.12ರಷ್ಟು ಇಳಿಕೆ ದಾಖಲಾಗಿದೆ ಎಂದು ಭಾರತೀಯ ವಾಹನಗಳ ತಯಾರಿಕ ಒಕ್ಕೂಟ (ಸಿಯಾಮಿ) ತಿಳಿಸಿದೆ.
ನವೆಂಬರ್ನಲ್ಲಿ ಶೇ 12.05ರಷ್ಟು ಕುಸಿತ
2018ರ ನವೆಂಬರ್ ತಿಂಗಳಲ್ಲಿ 20,38,007 ವಾಹನಗಳು ಮಾರಾಟವಾದರೆ, 2019ರ ಇದೇ ಅವಧಿಯಲ್ಲಿ 17,92,415 ವಾಹನಗಳು ಖರೀದಿಯಾಗಿವೆ. ಶೇ 12.05ರಷ್ಟು ಮಾರಾಟ ಕುಸಿತ ದಾಖಲಾಗಿದೆ. ಇದರಲ್ಲಿ ಕಾರುಗಳ ಮಾರಾಟದ ಕುಸಿತವು ಶೇ 10.83ರಷ್ಟು ಇಳಿಕೆಯಾಗಿದೆ. ದ್ವಿಚಕ್ರ, ತ್ರಿಚಕ್ರ ಸೇರೆ ಒಟ್ಟಾರಿ ಪ್ರಯಾಣಿಕ ಮಾರಾಟ ಶೇ 0.84ರಷ್ಟಿದೆ. ವಾಣಿಜ್ಯ ವಾಹನಗಳ ಮಾರಾಟದಲ್ಲಿ ಪರಿಸ್ಥಿತಿಯೂ ಇದಕ್ಕಿಂತ ಇನ್ನೂ ಭಿನ್ನವಾಗಿದೆ. ಕಳೆದ ವರ್ಷದಲ್ಲಿ 72,812 ವಾಹನಗಳ ಮಾರಾಟವಾಗಿದೆ. ಈ ವರ್ಷ 61,907 ವಾಹನಗಳ ಮಾರಾಟ ಮುಖೇನ ಶೇ 14.98ರಷ್ಟು ಇಳಿಕೆ ಕಂಡುಬಂದಿದೆ.