ಅಮರಾವತಿ: ಯುವಕರನ್ನು ತಪ್ಪು ಹಾದಿಗೆ ತಳ್ಳುತ್ತಿರುವ ರಮ್ಮಿ ಮತ್ತು ಪೋಕರ್‌ನಂತಹ ಆನ್‌ಲೈನ್ ಗೇಮ್ಗಳನ್ನು ನಿಷೇಧಿಸಲು ಆಂಧ್ರಪ್ರದೇಶ ಸರ್ಕಾರ ಗುರುವಾರ ನಿರ್ಧರಿಸಿದೆ.
ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಆನ್‌ಲೈನ್ ಜೂಜಾಟ ನಿಷೇಧಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಮಾಹಿತಿ ಸಚಿವ ಪೆರ್ನಿ ವೆಂಕಟರಾಮಯ್ಯ (ನಾನಿ) ತಿಳಿಸಿದ್ದಾರೆ.
ನಿನ್ನೆಯಷ್ಟೇ ಕೇಂದ್ರ ಸರ್ಕಾರವು ರಾಷ್ಟ್ರೀಯ ಭದ್ರತೆಯ ಆತಂಕದ ಹಿನ್ನಲೆಯಲ್ಲಿ ವಿಡಿಯೋ ಗೇಮಿಂಗ್ ಪಬ್ಜಿ ಸೇರಿದಂತೆ ಚೀನಾ ಮೂಲದ ಇತರೆ 118 ಆ್ಯಪ್ಗಳನ್ನು ನಿಷೇಧಿಸಿತ್ತು. ಇದರ ಬೆನ್ನಲ್ಲೇ ಜಗನ್ ಸರ್ಕಾರ ಯುವಕರನ್ನು ದಾರಿ ತಪ್ಪಿಸುತ್ತಿರುವ ಆನ್ಲೈನ್ಗೇಮಿಂಗ್ ಆ್ಯಪ್ಗಳ ನಿಷೇಧದ ನಿರ್ಧಾರ ತೆಗೆದುಕೊಂಡಿದೆ.
ಕ್ಯಾಬಿನೆಟ್ ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವರು, ಆನ್‌ಲೈನ್ ಜೂಜಾಟವು ಯುವಕರನ್ನು 'ದಾರಿತಪ್ಪಿಸುವ' ಮೂಲಕ ಯುವ ಸಮುದಾಯನ್ನು ಹಾನಿಗೊಳಗಾಗುವಂತೆ ಮಾಡುತ್ತಿದೆ. ಆದ್ದರಿಂದ ನಾವು ಯುವಕರನ್ನು ರಕ್ಷಿಸಲು ಇಂತಹ ಎಲ್ಲಾ ಆನ್‌ಲೈನ್ ಜೂಜಾಟವನ್ನು ನಿಷೇಧಿಸಲು ನಿರ್ಧರಿಸಿದ್ದೇವೆ ಎಂದು ನಾನಿ ಹೇಳಿದರು.
ರಾಜ್ಯ ಕ್ಯಾಬಿನೆಟ್ ನಿರ್ಧಾರದ ಪ್ರಕಾರ, ಆನ್‌ಲೈನ್ ಜೂಜಾಟ ಆಯೋಜಿಸುವ ಸಂಘಟಕರಿಗೆ ಮೊದಲ ಬಾರಿ ಎಸಗಿದ ಅಪರಾಧಕ್ಕೆ ದಂಡ ವಿಧಿಸುವುದರ ಜೊತೆಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಎರಡನೆಯ ಅಪರಾಧಕ್ಕೆ ದಂಡದ ಜೊತೆಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷ ಅನುಭವಿಸಬೇಕಾಗುತ್ತದೆ. ಆನ್‌ಲೈನ್ ಜೂಜು ಆಡುವವರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.