ನವದೆಹಲಿ: ಅನಾಮಧೇಯ ಮೂಲಗಳಿಂದ ರಾಷ್ಟ್ರೀಯ ಪಕ್ಷಗಳಿಗೆ ಸಾವಿರಾರು ಕೋಟಿ ರೂಪಾಯಿ ದೇಣಿಗೆ ಹಣ ಕಳೆದ ಒಂದೂವರೆ ದಶಕದಲ್ಲಿ ಹರಿದುಬಂದಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ತಿಳಿಸಿದೆ.
ರಾಷ್ಟ್ರೀಯ ಪಕ್ಷಗಳು 2004-05 ಹಾಗೂ 2018-19ರ ಹಣಕಾಸು ವರ್ಷದಲ್ಲಿ ಅನಾಮಧೇಯ ಮೂಲಗಳಿಂದ ₹ 11,234.12 ಕೋಟಿ ಸ್ವೀಕರಿಸಿವೆ. ಇದರಲ್ಲಿ ಸಿಂಹಪಾಲು ಬಿಜೆಪಿಯದ್ದೇ ಇದೆ. ಬಿಜೆಪಿ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿಪಿಎಂ, ಎನ್‌ಸಿಪಿ, ಬಿಎಸ್‌ಪಿ ಮತ್ತು ಸಿಪಿಐ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ದಾಖಲೆಗಳನ್ನು ಆಧರಿಸಿ ಎಡಿಆರ್ ಆದಾಯದ ಮೂಲವನ್ನು ವಿಶ್ಲೇಷಿಸಿ ವರದಿ ರೆಡಿ ಮಾಡಿದೆ.
2018-19ರಲ್ಲಿ 1,612 ಕೋಟಿ ರೂ. ಅನಾಮಧೇಯ ಮೂಲಗಳಿಂದ ದೇಣಿಗೆ ಸ್ವೀಕರಿಸಲಾಗಿದೆ ಎಂದು ಬಿಜೆಪಿ ಘೋಷಿಸಿಕೊಂಡಿದೆ. ರಾಷ್ಟ್ರೀಯ ಪಕ್ಷಗಳ ಒಟ್ಟಾರೆ (₹ 2,512 ಕೋಟಿ) ದೇಣಿಗೆಯಲ್ಲಿ ಬಿಜೆಪಿಯ ಪಾಲು ಶೇ 64. ಐದು ರಾಷ್ಟ್ರೀಯ ಪಕ್ಷಗಳು ಘೋಷಿಸಿಕೊಂಡ ಈ ಅನಾಮಧೇಯ ನಿಧಿಯ ಒಟ್ಟು ₹ 900.94 ಕೋಟಿ ಹಣಕ್ಕಿಂತ ಬಿಜೆಪಿಯದ್ದು 1.5 ಪಟ್ಟು ಅಧಿಕವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ₹ 20,000ಕ್ಕಿಂತ ಕಡಿಮೆ ಮೊತ್ತದ ದೇಣಿಗೆಯ ಮೂಲವನ್ನು ಉಲ್ಲೇಖಿಸದೆ 'ಅನಾಮಧೇಯ ಮೂಲಗಳು' ಎಂದು ನಮೂದಿಸಲಾಗಿದೆ. ಇಂಥ ಮೂಲಗಳಿಂದ ರಾಜಕೀಯ ಪಕ್ಷಗಳಿಗೆ ಬಂದ ಒಟ್ಟು ಮೊತ್ತ ₹ 11,234 ಕೋಟಿ ಇದೆ. ಚುನಾವಣಾ ಬಾಂಡ್, ಕೂಪನ್‌ಗಳ ಮಾರಾಟ, ಪರಿಹಾರ ನಿಧಿ, ಇತರ ಆದಾಯಗಳು, ಸ್ವಯಂಪ್ರೇರಿತ ದೇಣಿಗೆ ಮತ್ತು ಸಭೆ ಹಾಗೂ ಮೋರ್ಚಾಗಳಲ್ಲಿ ಸಂಗ್ರಹಿಸಿದ ಹಣ ಸಹ ಇದರಲ್ಲಿ ಒಳಗೊಂಡಿದೆ.
ಕಾಂಗ್ರೆಸ್ ಪಕ್ಷದ ಅನಾಮಧೇಯ ದೇಣಿಗೆ ₹ 728.88 ಕೋಟಿಯ ಮುಖೇನ ಶೇ 29ರಷ್ಟು ಹೆಚ್ಚಾಗಿದೆ. 2004- 05ರಿಂದ 2018-19ರ ನಡುವೆ ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕೂಪನ್ ಮಾರಾಟದಿಂದ ₹ 3902.63 ಕೋಟಿ ಸಂಗ್ರಹಿಸಿವೆ. ಎಐಟಿಸಿ, ಸಿಪಿಎಂ, ಎನ್‌ಸಿಪಿ ಹಾಗೂ ಸಿಪಿಐ ಕ್ರಮವಾಗಿ ₹ 97.28 ಕೋಟಿ, ₹ 36.395 ಕೋಟಿ, ₹ 35.775 ಕೋಟಿ ಹಾಗೂ ₹ 2.61 ಕೋಟಿಯಷ್ಟಿದೆ ಎಂದು ಎಡಿಆರ್ ಹೇಳಿದೆ.