ನವದೆಹಲಿ: ದೀರ್ಘಾವಧಿಯ ಸ್ವತ್ತುಗಳ ಮೇಲೆ ಹೂಡಿಕೆ ಮಾಡುವ ಬಿಡಿಭಾಗ ತಯಾರಿಕಾ ಉದ್ಯಮ ಸಂಬಂಧಿತ ಎಲ್ಲ ವಿಭಾಗಗಳಿಗೆ ಜಿಎಸ್ಟಿಯಲ್ಲಿ ಏಕರೂಪದ ಶೇ 18 ಸ್ಲ್ಯಾಬ್ನ ತೆರಿಗೆ ವಿಧಿಸುವಂತೆ ವಾಹನ ಬಿಡಿಭಾಗ ತಯಾರಕರ ಸಂಸ್ಥೆ (ಎಸಿಎಂಎ) ಕೇಂದ್ರವನ್ನು ಒತ್ತಾಯಿಸಿದೆ.
ವಾಹನ ಬಿಡಿಭಾಗ ತಯಾರಿಕಾ ಉದ್ಯಮವು ಪ್ರಸ್ತುತ 50 ಲಕ್ಷ ಜನರನ್ನು ನೇಮಿಸಿಕೊಂಡಿದ್ದು, ಭಾರತದ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ಶೇ 2.3ರಷ್ಟು ಕೊಡುಗೆ ನೀಡುತ್ತಿದೆ. ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳ ಮಾರಾಟ ಬೆಳವಣಿಗೆಯು ತೀವ್ರವಾದ ಕುಸಿತದಿಂದ ವಾಹನ ಬಿಡಿಭಾಗ ತಯಾರಿಕಾ ವಲಯದ ಮೇಲೂ ಪರಿಣಾಮ ಬೀರಿದೆ.
ವಾಹನ ತಯಾರಿಕಾ ಘಟಕಗಳ ಎಲ್ಲ ವಲಯಕ್ಕೂ ಜಿಎಎಸ್ಟಿಯ ಶೇ 18 ಸ್ಲ್ಯಾಬ್ನ ಏಕರೂಪ ದರ ವಿಧಿಸಬೇಕು ಎಂದು ವಾಹನ ಬಿಡಿಭಾಗ ತಯಾರಕರ ಸಂಸ್ಥೆಯ ವಾರ್ಷಿಕ ಶೃಂಗಸಭೆಯಲ್ಲಿ ಎಸಿಎಂಎ ಅಧ್ಯಕ್ಷ ರಾಮ್ ವೆಂಕಟರಮಣಿ ಮನವಿ ಮಾಡಿದರು.
ಪ್ರಸ್ತುತ ವಾಹನ ತಯಾರಿಕಾ ಉದ್ಯಮದಲ್ಲಿ ಶೇ 60ರಷ್ಟು ಘಟಕಗಳಿಗೆ ಶೇ 18 ಪ್ರತಿಶತದಷ್ಟು ತೆರಿಗೆ ವಿಧಿಸಲಾಗುತ್ತಿದೆ. ಉಳಿದ ಘಟಕಗಳಿಗೆ ಹೆಚ್ಚಿನ ಮೌಲ್ಯದ ಶೇ 28ರಷ್ಟು ಸುಂಕವಿದೆ ಎಂದು ಹೇಳಿದರು.