ಮುಂಬೈ: ಕೊರೊನಾ 2ನೇ ಅಲೆಯಿಂದಾಗಿ ಜಗತ್ತಿನ ಎಲ್ಲ ರಾಷ್ಟ್ರಗಳ ಮೇಲು ಆರ್ಥಿಕ ಹೊಡೆತ ಬಿದ್ದಿದೆ. ಇನ್ನು ಭಾರತದಲ್ಲೂ ಕೊರೊನಾ ಅಲೆ ಆರ್ಥಿಕವಾಗಿ ನಷ್ಟವಾಗುವಂತೆ ಮಾಡಿದೆ. ಆರ್‌ಬಿಐ ಹೊರಡಿಸಿರುವ ವರದಿಯ ಪ್ರಕಾರ ಒಟ್ಟು 2 ಲಕ್ಷ ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
2ನೇ ಅಲೆಯು ಮುಖ್ಯವಾಗಿ ದೇಶಾದ್ಯಂತದ ಲಾಕ್‌ಡೌನ್‌ಗಿಂತ ಪ್ರಾದೇಶಿಕ ಮತ್ತು ನಿರ್ದಿಷ್ಟ ದೇಶೀಯ ಬೇಡಿಕೆಗೆ ಕುತ್ತು ತಂದಿದೆ. 2 ಅಲೆ ಪರಿಣಾಮ 2021-22ನೇ ಸಾಲಿನಲ್ಲಿ ಸುಮಾರು 2 ಲಕ್ಷ ಕೋಟಿ ರೂ. ಉತ್ಪಾದನೆಯ ಮೇಲೆ ಪರಿಣಾಮ ಬೀರಿ ನಷ್ಟವಾಗಿರುವ ಅಂದಾಜಿದೆ ಎಂದು ಕೇಂದ್ರೀಯ ಬ್ಯಾಂಕಿನ ಕಾರ್ಯಕರ್ತರು ಬರೆದಿರುವ 'ಸ್ಟೇಟ್ ಆಫ್ ಎಕಾನಮಿ' ಕುರಿತು ಇತ್ತೀಚಿನ ಲೇಖನವೊಂದು ತಿಳಿಸಿದೆ.
ದೇಶೀಯ ಬೇಡಿಕೆಯ ಮೇಲೆ ತೀವ್ರ ಹೊಡೆತ ಬಿದ್ದರೂ ಒಟ್ಟಾರೆ ಪೂರೈಕೆಯ ಪರಿಸ್ಥಿತಿ ಸಮಾಧಾನಕರವಾಗಿದೆ. ಕೃಷಿ ಮತ್ತು ಸಂಪರ್ಕವಿಲ್ಲದ ಸೇವೆಗಳು ಮಾರುಕಟ್ಟೆ ಸ್ಥಿತಿಯನ್ನು ಹಿಡಿದಿಟ್ಟುಕೊಂಡಿವೆ. ಕೋವಿಡ್ ನಿರ್ಬಂಧಗಳ ಮಧ್ಯೆ ಕೈಗಾರಿಕೆ ಉತ್ಪಾದನೆ ಮತ್ತು ರಫ್ತು ಹೆಚ್ಚಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಇದಲ್ಲದೇ ಕೋವಿಡ್ಗಾಗಿ ನೀಡಲಾಗುತ್ತಿರುವ ಲಸಿಕಾ ಅಭಿಯಾನದ ವೇಗ ಮತ್ತು ಪ್ರಮಾಣವು ಆರ್ಥಿಕ ಚೇತರಿಕೆತ ಹಾದಿ ರೂಪಿಸಲಿದೆ. ಇದು ಕೋವಿಡ್ ಸಾಂಕ್ರಾಮಿಕದಿಂದ ದೇಶ ಚೇತರಿಸಿಕೊಳ್ಳುವ ಮೂಲ ಅಂಶ ಒಳಗೊಂಡಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಲೇಖಕರ ಅಭಿಪ್ರಾಯಗಳು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಆರ್‌ಬಿಐ ಇದೇ ವೇಳೆ ಹೇಳಿದೆ.