ಮುಂಬೈ: ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯದ (ಇಡಿ) ವಶದಲ್ಲಿರುವ ಯೆಸ್ ಸಂಸ್ಥಾಪಕ ರಾಣಾ ಕಪೂರ್ ಅವರನ್ನು ಮಾರ್ಚ್ 16ರವರೆಗೆ ತನ್ನ ಅಧೀನದಲ್ಲಿ ಇರಿಸಿಕೊಳ್ಳಲು ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.
ವಿಚಾರಣೆ ವೇಳೆಯಲ್ಲಿ ಇಡಿ, ಕಪೂರ್ ಅವರು ತಮ್ಮ ಅಧಿಕಾರಾವಧಿಯಲ್ಲಿ ₹ 30,000 ಕೋಟಿಯಷ್ಟು ಸಾಲವನ್ನು ವಿವಿಧ ಘಟಕಗಳಿಗೆ ನೀಡಿದ್ದಾರೆ ಎಂದು ಅಕ್ರಮ ಹಣ ವರ್ಗಾವಣೆ ನಿಗ್ರಹದ (ಪಿಎಂಎಲ್ಎ) ವಿಶೇಷ ನ್ಯಾಯಾಲಯಕ್ಕೆ ತಿಳಿಸಿತು.
62 ವರ್ಷದ ಕಪೂರ್, ಖಾಸಗಿ ಬ್ಯಾಂಕ್ನ ಮಾಜಿ ಎಂಡಿ ಹಾಗೂ ಸಿಇಒ ಅವರನ್ನು ಇಡಿ ಸೋಮವಾರ ಪಿಎಂಎಲ್ಎ ಕಾಯ್ದೆಯಡಿ ವಶಕ್ಕೆ ಪಡೆಯಿತು. ಈ ಹಿಂದೆ ನ್ಯಾಯಾಲಯವು ಮಾರ್ಚ್ 11ರ ತನಕ ವಶದಲ್ಲಿ ಇರಿಸಿಕೊಳ್ಳಲು ಇಡಿಗೆ ಅವಕಾಶ ನೀಡಿತ್ತು. ಇಂದು ವಿಚಾರಣೆ ನಡೆಸಿದ ವಿಶೇಷ ಕೋರ್ಟ್ನ ನ್ಯಾಯಮೂರ್ತಿ ಪಿ.ಪಿ. ರಾಜವೈದ್ಯ ಅವರು, ಮಾರ್ಚ್ 16ರವರೆಗೆ ಇಡಿ ವಶದಲ್ಲಿ ಇರಿಸಿಕೊಳ್ಳಲು ಅನುಮತಿ ನೀಡಿದ್ದಾರೆ.
ಸುಮಾರು 20,000 ಕೋಟಿ ರೂ.ಯಷ್ಟು ವಸೂಲಾಗದ ಸಾಲವಿದೆ. ಈ ಹಣ ಹೇಗೆ ವರ್ಗಾವಣೆ ಮಾಡಲಾಯಿತು ಎಂಬುದರ ಕುರಿತು ತನಿಖೆ ಮಾಡುವ ಅಗತ್ಯವಿದೆ ಎಂದು ಇಡಿ ಅಧಿಕಾರಿಗಳು ಕೋರ್ಟ್ಗೆ ಮನವರಿಕೆ ಮಾಡಿದರು.