ಮುಂಬೈ: ಯೆಸ್ ಬ್ಯಾಂಕ್ ಸಾಲ ನೀಡಿಕೆಯ ಹಣಕಾಸು ಬಿಕ್ಕಟ್ಟಿನ ತನಿಖೆ ವೇಗವನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ತಂಡ ಚುರುಕೊಗೊಳಿಸಿದ್ದು, ಅನಿಲ್ ಅಂಬಾನಿಗೆ ಸಮನ್ಸ್ ನೀಡಿದ ಬೆನ್ನಲ್ಲೇ ಮತ್ತೊಂದಿಷ್ಟು ಉದ್ಯಮಿಗಳಿಗೆ ಸಮನ್ಸ್ ಹೊರಡಿಸಿದೆ.
ರಾಣಾ ಕಪೂರ್ ನೇತೃತ್ವದ ಆಡಳಿತವು ಸಾಲ ನೀಡಿದ ಎಲ್ಲ ದೊಡ್ಡ ಸಾಲಗಾರರನ್ನು ಜಾರಿ ನಿರ್ದೇಶನಾಲಯ (ಇಡಿ) ಕರೆಸಲಿದೆ. ಮಾರ್ಚ್ 17ರಿಂದ ಮಾರ್ಚ್ 21ರವರೆಗೆ ಯೆಸ್ ಬ್ಯಾಂಕ್‌ನ ಎಲ್ಲ ಉನ್ನತ ಸಾಲಗಾರರನ್ನು ಏಜೆನ್ಸಿ ಕರೆಸಿ ವಿಚಾರಣೆ ನಡೆಸಲಿದೆ ಎಂದು ತನಿಖಾ ತಂಡದ ಅಧಿಕಾರಿಯೊಬ್ಬರು ಐಎಎನ್‌ಎಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಸೋಮವಾರವಷ್ಟೇ ಅನಿಲ್ ಅಂಬಾನಿಗೆ ಇಡಿ ಸಮನ್ಸ್ ನೀಡಿತ್ತು. ಇದೀಗ ಎಸ್ಸೆಲ್ ಗ್ರೂಪ್ ಮುಖ್ಯಸ್ಥ ಸುಭಾಷ್ ಚಂದ್ರಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ. ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರನ್ನು ಒಳಗೊಂಡ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಈ ಸಮನ್ಸ್ ಜಾರಿ ಮಾಡಲಾಗಿದೆ.
ಸುಭಾಶ್ಚಂದ್ರ ಅಧ್ಯಕ್ಷರಾಗಿರುವ ಎಸ್ಸೆಲ್ ಗ್ರೂಪ್ ಬಿಕ್ಕಟ್ಟಿನಲ್ಲಿರುವ ಯೆಸ್ ಬ್ಯಾಂಕ್‌ಗೆ ಸುಮಾರು 8,000 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ. ಬುಧವಾರ ವಿಚಾರಣೆಗೆ ಹಾಜರಾಗುವಂತೆ ಸುಭಾಶ್ಚಂದ್ರ ಅವರಿಗೆ ಸೂಚಿಸಲಾಗಿದೆ. ಜೊತೆಗೆ ಜೆಟ್ ಏರ್‌ವೇಸ್ ಮಾಜಿ ಮುಖ್ಯಸ್ಥ ನರೇಶ್ ಗೋಯಲ್, ಡಿಎಚ್‌ಎಫ್‌ಎಲ್ ಮಾಲಿಕ ಕಪಿಲ್ ವಧವನ್, ಕಾಕ್ಸ್ ಆ್ಯಂಡ್ ಕಿಂಗ್ಸ್‌ನ ಪೀಟರ್ ಕೆರ್ಕರ್, ಇಂಡಿಯಾಬುಲ್ಸ್‌ನ ಸಮೀರ್ ಗೆಹ್ಲೋಟ್ ಹಾಗೂ ಅವಂತಾ ರಿಯಾಲ್ಟಿ ಪ್ರವರ್ತಕ ಗೌತಮ್ ಥಾಪರ್ಗೂ ಸಮನ್ಸ್ ಜಾರಿಗೊಳಿಸಿದೆ.