ನವದೆಹಲಿ : ಭಾರತದ ದೈತ್ಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಮೀಸಲಾಗಿರುವ ಹೊಸ ಐಟಿ ನಿಯಮಗಳನ್ನು ಪಾಲಿಸುವ ಗಡುವು ಮಂಗಳವಾರ ಕೊನೆಗೊಳ್ಳುತ್ತಿದೆ.
ಫೇಸ್‌ಬುಕ್ ಕಂಪನಿಯು ಹೊಸ ಮಾರ್ಗಸೂಚಿಗಳ ನಿಯಮಗಳನ್ನು ಪಾಲಿಸುವ ಗುರಿ ಹೊಂದಿದ್ದು, ಅವುಗಳನ್ನು ಅನುಷ್ಠಾನಕ್ಕೆ ತರಲು ಕಾರ್ಯ ನಿರತವಾಗಿದೆ ಎಂದು ಸ್ಪಷ್ಟನೆ ನೀಡಿದೆ.
2021ರ ಫೆ.25ರಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊಸ ಐಟಿ ನಿಯಮಗಳನ್ನು ಪಾಲಿಸಲು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸೂಚಿಸಿ ಮೂರು ತಿಂಗಳ ವಾಯ್ದೆ ನೀಡಿತ್ತು. ಈ ನಿಯಮ ಇಂದಿಗೆ ಕೊನೆಯಾಗಲಿದೆ.
ಹೊಸ ನಿಯಮಗಳ ಅನುಸಾರ ಅಧಿಕಾರಿಗಳ ನೇಮಕ, ಭಾರತದಲ್ಲಿ ಅವರ ಹೆಸರು ಮತ್ತು ಸಂಪರ್ಕಿಸುವ ವಿಳಾಸ, ದೂರು ಪರಿಹಾರ, ಆಕ್ಷೇಪಾರ್ಹ ವಿಷಯದ ಮೇಲ್ವಿಚಾರಣೆ, ಅನುಸರಣೆ ವರದಿ, ಆಕ್ಷೇಪಾರ್ಹ ವಿಷಯ ನಿಷ್ಕ್ರಿಯೆಗೊಳಿಸುವುದು ಸೇರಿದಂತೆ ಇತರೆ ನಿಯಮಗಳಿವೆ.
ನಾವು ಐಟಿ ನಿಯಮಗಳ ನಿಬಂಧನೆಗಳನ್ನು ಪಾಲಿಸುವ ಗುರಿ ಹೊಂದಿದ್ದೇವೆ. ಸರ್ಕಾರದೊಂದಿಗೆ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಂಡು ಅಗತ್ಯವಿರುವ ಕೆಲವು ವಿಷಯಗಳ ಬಗ್ಗೆ ಚರ್ಚಿಸುವುದನ್ನು ಮುಂದುವರಿಸುತ್ತೇವೆ ಎಂದು ಕಂಪನಿಯ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಐಟಿ ನಿಯಮಗಳಿಗೆ ಅನುಸಾರವಾಗಿ, ನಾವು ಕಾರ್ಯಾಚರಣೆಯ ಪ್ರಕ್ರಿಯೆಗಳನ್ನು ಕಾರ್ಯಗತಗೊಳಿಸಲು ಮತ್ತು ದಕ್ಷತೆಯನ್ನು ಸುಧಾರಿಸಲು ಕೆಲಸ ಮಾಡುತ್ತಿದ್ದೇವೆ. ನಮ್ಮ ವೇದಿಕೆಯಲ್ಲಿ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ತಮ್ಮನ್ನು ತಾವು ವ್ಯಕ್ತಪಡಿಸುವ ಜನರ ಸಾಮರ್ಥ್ಯಕ್ಕೆ ಫೇಸ್‌ಬುಕ್ ಬದ್ಧವಾಗಿದೆ ಎಂದಿದ್ದಾರೆ.
ಮೇ 25ರ ಹೊಸ ನೀತಿಯ ಗಡುವಿಗೆ ಟ್ವಿಟರ್ ಅಧಿಕೃತವಾಗಿ ತನ್ನ ಸ್ಪಷ್ಟನೆ ನೀಡಬೇಕಿದೆ. ಹೊಸ ನಿಯಮಗಳ ಪ್ರಕಾರ, ಸರ್ಕಾರದ ನಿರ್ದೇಶನ ಅಥವಾ ಕಾನೂನು ಆದೇಶದ ನಂತರ ಸಾಮಾಜಿಕ ಮಾಧ್ಯಮ ವೇದಿಕೆಗಳು 36 ಗಂಟೆಗಳ ಒಳಗೆ ಆಕ್ಷೇಪಾರ್ಹ ವಿಷಯ ತೆಗೆದು ಹಾಕಬೇಕಾಗುತ್ತದೆ.
ಹೊಸ ನಿಯಮಗಳು ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಸೇರಿದಂತೆ ಮಧ್ಯವರ್ತಿಗಳು ಬಳಕೆದಾರರು ಅಥವಾ ಬಲಿಪಶುಗಳಿಂದ ದೂರುಗಳನ್ನು ಸ್ವೀಕರಿಸಲು ಮತ್ತು ಪರಿಹರಿಸಲು ಕುಂದುಕೊರತೆ ಪರಿಹಾರ ವ್ಯವಸ್ಥೆ ಸ್ಥಾಪಿಸಬೇಕು.
ಸ್ವದೇಶಿ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ ಮಾತ್ರ ಹೊಸ ಐಟಿ (ಮಧ್ಯವರ್ತಿ ಮಾರ್ಗಸೂಚಿಗಳು) ನಿಯಮಗಳು 2021ರ ಅನುಸರಣೆಗಳನ್ನು ಪೂರೈಸಿದೆ. ಭಾರತೀಯ ನಿವಾಸಿ ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಅಧಿಕಾರಿ ಮತ್ತು ಕುಂದುಕೊರತೆ ಅಧಿಕಾರಿ, ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಸಹ ಜಾರಿಗೆ ತಂದಿದೆ ಎಂದು ಕೂ ಹೇಳಿದೆ.