ಮುಂಬೈ: ಭಾರತದ ವಿತ್ತೀಯ ನಿಯಂತ್ರಕಗಳ ಕೇಂದ್ರ ಬಿಂದು ಆದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಅಮೆರಿಕ ಮತ್ತು ಯೂರೋಪ್ ಬ್ಯಾಂಕ್ಗಳಂತೆ ಜನಪ್ರಿಯ ಬ್ಯಾಂಕ್ ಎಂಬ ಹೆಗ್ಗಳಿಕೆ ಹೊಂದಿದೆ.
ಮಾಹಿತಿ ನೀಡಿಕೆಗೆ ಮೈಕ್ರೋ ಬ್ಲಾಗಿಂಗ್ ವೇದಿಕೆ ಆಗುತ್ತಿರುವ ಈ ಕಾಲಘಟ್ಟದಲ್ಲಿ ಅನೇಕ ಕೇಂದ್ರೀಯ ಬ್ಯಾಂಕ್ಗಳು ಟ್ವಿಟರ್ನಲ್ಲಿ ಸಕ್ರಿಯ ಆಗುತ್ತಿವೆ. ಕೊರೊನಾ ವೈರಸ್ ಬಿಕ್ಕಟ್ಟು ಉದ್ಭವಿಸಿದ ಬಳಿಕೆ ಇದರ ಬಳಕೆ ವ್ಯಾಪಕವಾಗಿ ಹೆಚ್ಚಿದೆ. ತಮ್ಮ ವಿತ್ತೀಯ ನಡೆಗಳನ್ನು ಈ ಮೂಲಕ ನೆಟ್ಟಿಗರ ಮುಂದೆ ಇಡುತ್ತಿದ್ದಾರೆ.
85 ವರ್ಷದ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ತಮ್ಮದೇ ಆದ ಪ್ರತ್ಯೇಕ ಟ್ವಿಟರ್ ಖಾತೆ ಹೊಂದಿದ್ದಾರೆ. ಪ್ರಮುಖ ಕೇಂದ್ರೀಯ ಬ್ಯಾಂಕ್ಗಳ ಅಧಿಕೃತ ಟ್ವಿಟರ್ ಖಾತೆಗಳ ಪೈಕಿ ಆರ್ಬಿಐ ಗರಿಷ್ಠ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದೆ. ಗುರುವಾರ ಬೆಳಗ್ಗೆಯಷ್ಟೇ ಆರ್ಬಿಐನ ಟ್ವಿಟರ್ ಹ್ಯಾಂಡಲ್ನಲ್ಲಿ 7.45 ಲಕ್ಷ ಫಾಲೋವರ್ಗಳನ್ನು ಹೊಂದಿದೆ. 2020ರ ಏಪ್ರಿಲ್ 20ರ ಒಂದೇ ದಿನ 1.31 ಲಕ್ಷ ಹೊಸ ಅನುಯಾಯಿಗಳು ಸೇರ್ಪಡೆ ಆಗಿದ್ದಾರೆ.
ಆರ್ಬಿಐ ತನ್ನ ಅಧಿಕೃತ ಟ್ವಿಟರ್ ಖಾತೆಯನ್ನು 2012ರ ಜನವರಿಯಲ್ಲಿ ತೆರೆಯಿತು. 2019ರ ಮಾರ್ಚ್ ನಲ್ಲಿ ಅನುಯಾಯಿಗಳ ಸಂಖ್ಯೆ ಸುಮಾರು 3,42,000 ಇತ್ತು. ಈಗ ಅದು 7,50,000ಕ್ಕಿಂತ ಹೆಚ್ಚಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೂರ್ವ ಏಷ್ಯಾ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್ಗಳ ಪೈಕಿ ಆರ್ಬಿಐ ಅತ್ಯಧಿಕ ಅನುಯಾಯಿಗಳನ್ನು ಹೊಂದಿದೆ. ಬ್ಯಾಂಕ್ ಇಂಡೋನೇಷ್ಯಾ- 7.15 ಲಕ್ಷ, ಬಾಂಕೋ ಡಿ ಮೆಕ್ಸಿಕೊ- ಅಪೆಕ್ಸ್ ಬ್ಯಾಂಕ್ ಆಫ್ ಮೆಕ್ಸಿಕೋ- 7.11 ಲಕ್ಷ ಫಾಲೋವರ್ಸ್ ಮೂಲಕ ನಂತರದ ಸ್ಥಾನದಲ್ಲಿವೆ.