ಬೆಂಗಳೂರು: ಐಟಿ ಮತ್ತು ತಂತ್ರಜ್ಞಾನ ಸೇವೆ ಒದಗಿಸುವ ವಿಪ್ರೋ ತನ್ನ ಉದ್ಯೋಗಿಗಳಿಗೆ 2021ರ ಜನವರಿ 18ರವರೆಗೆ ಮನೆಯಿಂದ (ಡಬ್ಲ್ಯುಎಫ್‌ಹೆಚ್) ಕೆಲಸ ಮಾಡಲು ಆದೇಶಿಸಿದೆ. ಭಾರತ ಮತ್ತು ಅಮೆರಿಕದಲ್ಲಿ ಕೋವಿಡ್ -19 ಸಾಂಕ್ರಾಮಿಕ ಪೀಡಿತರ ಸಂಖ್ಯೆಯಲ್ಲಿ ಉಲ್ಬಣಗೊಳ್ಳುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವಿಪ್ರೋ ಸಂಸ್ಥೆಯ ಹತ್ತು ನೌಕರರ ಪೈಕಿ ಒಂಭತ್ತು ಮಂದಿ ಈ ಎರಡೂ ದೇಶಗಳಲ್ಲಿ ನೆಲೆಸಿದ್ದಾರೆ. ಡಬ್ಲ್ಯುಎಫ್‌ಹೆಚ್ ವಿಸ್ತರಣೆಯ ಬಗ್ಗೆ ನೌಕರರಿಗೆ ಮಾಹಿತಿ ನೀಡಿದ ಬೆಂಗಳೂರು ಮೂಲದ ಕಂಪನಿ, ಕಚೇರಿಗೆ ಹೋಗಬೇಕಾದವರಿಗೆ ಇತರ ಮಾರ್ಗಸೂಚಿಗಳು ಮುಂದಿನ ವರ್ಷದ ಜನವರಿಯವರೆಗೂ ಹಾಗೆಯೇ ಮುಂದುವರೆಯುತ್ತವೆ ಎಂದು ತಿಳಿಸಿದೆ.
ನಮ್ಮ ಉದ್ಯೋಗಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡಿದ್ದೇವೆ. ಮನೆಯಿಂದಲೇ ಕೆಲಸ ನಿರ್ವಹಿಸುವ ನೀತಿಯನ್ನು 2021ರ ಜನವರಿ 18ರವರೆಗೆ ವಿಸ್ತರಿಸಿದ್ದೇವೆ. ಈಗಿನಂತೆ ನಮ್ಮ ಸುಮಾರು ಶೇ. 98ರಷ್ಟು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲಿದ್ದಾರೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ಮತ್ತು ಅಮೆರಿಕದ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ಅವಧಿಯನ್ನು 2021ರ ಜನವರಿ 18ರವರೆಗೆ ವಿಸ್ತರಿಸಲು ನಾವು ನಿರ್ಧರಿಸಿದ್ದೇವೆ. ಸಾಂಕ್ರಾಮಿಕ ಪರಿಸ್ಥಿತಿ, ಸ್ಥಳೀಯ ಮಾರ್ಗಸೂಚಿಗಳು ಮತ್ತು ಗ್ರಾಹಕರ ಅವಶ್ಯಕತೆಗಳನ್ನು ಅವಲಂಬಿಸಿ ಇತರ ದೇಶಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಕಾರ್ಯಾಕಾರಿ ಮುಖ್ಯ ಅಧಿಕಾರಿ ಭಾನುಮೂರ್ತಿ ಬಿ. ಮತ್ತು ಮಾನವ ಸಂಪನ್ಮೂಲ ಮುಖ್ಯ ಅಧಿಕಾರಿ ಸೌರಭ್ ಗೋವಿಲ್ ನೌಕರರಿಗೆ ಇಮೇಲ್ ಮುಖಾಂತರ ಮಾಹಿತಿ ನೀಡಿದ್ದಾರೆ.
ಭಾರತದ ಉನ್ನತ ಐಟಿ (ಮಾಹಿತಿ ತಂತ್ರಜ್ಞಾನ) ಸಂಸ್ಥೆಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಇನ್ಫೋಸಿಸ್ ಮತ್ತು ವಿಪ್ರೋಗಳಲ್ಲಿ ಸುಮಾರು ಶೇ. 98ರಷ್ಟು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಎಂದು ಅಕ್ಟೋಬರ್‌ನಲ್ಲಿ ವರದಿಯಾಗಿದೆ. ಸೆಪ್ಟೆಂಬರ್‌ನಲ್ಲಿ ಕೊನೆಗೊಂಡ ಆರ್ಥಿಕ ತ್ರೈಮಾಸಿಕದಲ್ಲಿ ನಿರ್ವಹಣೆಯ ಬಗ್ಗೆ ಮಾಹಿತಿಯ ಪ್ರಕಾರ, ಮನೆಯಿಂದ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಸಂಖ್ಯೆ 8.61 ಲಕ್ಷ ಆಗಿದೆ.