ವಾಷಿಂಗ್ಟನ್: ವಿಶ್ವದ ನಾಲ್ಕು ಅತ್ಯಂತ ಪ್ರಮುಖ ತಂತ್ರಜ್ಞಾನ ದಿಗ್ಗಜ ಕಂಪನಿಗಳ ಮುಖ್ಯಸ್ಥರು ಇದೇ ಮೊದಲ ಬಾರಿಗೆ ಅಮೆರಿಕ ಸಂಸತ್ತಿನೆದುರು ಹಾಜರಾಗಿ ಅವರು ಕೇಳುವ ಅತ್ಯಂತ ಕಠಿಣ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
ಇದು ಡಿಜಿಟಲ್ ಜಗತ್ತಿನಲ್ಲಿ ಪಾರಮ್ಯ ಮೆರೆಯುತ್ತಿರುವ ಈ ಕಂಪನಿಗಳ ಮಾರುಕಟ್ಟೆ ಶಕ್ತಿ ಕುರಿತ ಅಪನಂಬಿಕೆ ಆರೋಪಗಳ ಪ್ರಕರಣದ ತನಿಖೆಯ ಮುಂದುವರಿದ ಭಾಗವಾಗಿದೆ. ಈ ಬಗ್ಗೆ ಅಮೆರಿಕದ ಸಂಸತ್ ಸದಸ್ಯರು ತಂತ್ರಜ್ಞಾನ ದಿಗ್ಗಜರಿಗೆ ಖಡಕ್ ಪ್ರಶ್ನೆಗಳನ್ನು ಕೇಳಲಿದ್ದಾರೆ. ಇದೊಂದು ರೀತಿಯಲ್ಲಿ ಅಮೆರಿಕದ ಸಂಸತ್ ಸದಸ್ಯರು ಮತ್ತು ತಂತ್ರಜ್ಞಾನ ದಿಗ್ಗಜ ಕಂಪನಿಗಳ 'ಮುಖಾಮುಖಿ' ಎಂದೇ ಬಣ್ಣಿಸಲಾಗುತ್ತಿದೆ.
ಅಮೆಜಾನ್‌ನ ಜೆಫ್ ಬೆಜೋಸ್, ಆ್ಯಪಲ್‌ನ ಟಿಮ್ ಕುಕ್, ಫೇಸ್‌ಬುಕ್‌ನ ಮಾರ್ಕ್ ಜುಕರ್‌ಬರ್ಗ್, ಗೂಗಲ್ ಮತ್ತು ಯೂಟ್ಯೂಬ್ ಒಡೆತನದ ಕಂಪನಿ ಆಲ್ಫಾ ಬೆಟ್‌ನ ಮುಖ್ಯಸ್ಥ ಸುಂದರ್ ಪಿಚೈ ಈ ವಿಚಾರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸತ್ತಿನ ನ್ಯಾಯಾಂಗ ಸಮಿತಿಯ ವಕ್ತಾರ ರಾಡಿಕ್ ಸ್ಮಿತ್ ತಿಳಿಸಿದ್ದಾರೆ. ಈ ವಿಚಾರಣೆಯ ಮೂಲಕ ಈ ಕಂಪನಿಗಳ ಮೇಲಿರುವ ಆರೋಪಗಳ ತನಿಖೆ ತಾರ್ಕಿಕ ಅಂತ್ಯ ಕಾಣಲಿದೆ ಎಂದು ಹೇಳಲಾಗುತ್ತಿದೆ.
ಅಮೆರಿಕದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರುಡುವ ಈ ದಿನಗಳಲ್ಲಿ ಈ ಮಹತ್ವದ ವಿಚಾರಣೆಗೆ ಅವರು ಖುದ್ದಾಗಿ ಪಾಲ್ಗೊಳ್ಳಲಿದ್ದಾರೆಯೇ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳಲಿದ್ದಾರೆಯೇ ಎಂಬ ಬಗ್ಗೆ ಇನ್ನೂ ಮಾಹಿತಿ ದೊರೆತಿಲ್ಲ.
ಹೇಗಿರಲಿದೆ ವಿಚಾರಣೆಯ ಸ್ವರೂಪ? ವಿಚಾರಣೆಯ ಅಂಶಗಳೇನು?
- ಜಾಹೀರಾತು ತಂತ್ರಜ್ಞಾನ, ಸರ್ಚ್ ಎಂಜಿನ್ ಮಾರುಕಟ್ಟೆಯಲ್ಲಿ ಗೂಗಲ್ ಹೊಂದಿರುವ ನಿಯಂತ್ರಣ
- ಸಣ್ಣಪುಟ್ಟ ಕಂಪನಿಗಳನ್ನು ಫೇಸ್ ಬುಕ್ ಸ್ವಾಧೀನಪಡಿಸಿಕೊಳ್ಳುತ್ತಿರುವುದು.
- ಆ್ಯಪ್ ಸ್ಟೋರ್ ಹೊಸ ಡೆವಲಪರ್‌ಗಳಿಗೆ ಮುಳುವಾಗುತ್ತಿರುವ ರೀತಿ
- ಜಾಹೀರಾತು ತಂತ್ರಜ್ಞಾನ, ಸರ್ಚ್ ಎಂಜಿನ್ ಮಾರುಕಟ್ಟೆಯಲ್ಲಿ ಗೂಗಲ್ ಹೊಂದಿರುವ ನಿಯಂತ್ರಣ
- ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಹರಿದಾಡುತ್ತಿರುವ ದ್ವೇಷ ಭಾಷಣಗಳು
ಈ ವಿಚಾರಣೆ ವೇಳೆ ಮೇಲ್ಕಂಡ ಜಗತ್ತಿನ ಟೆಕ್ ಘಟಾನುಘಟಿಗಳಿಗೆ ಅಮೆರಿಕದ ಅತ್ಯಂತ ನುರಿತ ರಾಜಕಾರಣಿಗಳು ಈ ಕಂಪನಿಗಳ ವ್ಯವಹಾರಗಳ ಮೇಲಿರುವ ಅಪನಂಬಿಕೆ, ಆನ್‌ಲೈನ್ ನಿಂದನೆ ಆರೋಪಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಕೇಳಲಿದ್ದಾರೆ. ಇದರ ಜೊತೆಗೆ ಈ ಕಂಪನಿಗಳ ಮುಖ್ಯಸ್ಥರು ಇನ್ನೂ ಅನೇಕ ಪ್ರಶ್ನೆಗಳನ್ನೂ ಎದುರಿಸಲಿದ್ದಾರೆ. ಉದಾಹರಣೆಗೆ, ಅಮೆಜಾನ್ ತನ್ನ ಗೋದಾಮುಗಳಲ್ಲಿ ಕೆಲಸಗಾರರನ್ನು ನೋಡಿಕೊಳ್ಳುವ ರೀತಿ, ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಹರಿದಾಡುತ್ತಿರುವ ದ್ವೇಷ ಭಾಷಣಗಳು ವಿಚಾರಣೆಯ ಭಾಗವಾಗಿರಲಿದೆ.
ಇಂಥ ವಿಚಾರಗಳ ಬಗ್ಗೆ ವಿಚಾರಣೆ ಎದುರಿಸಲು ಈ ಕಂಪನಿಗಳು ಹಿಂದೇಟು ಹಾಕುತ್ತಲೇ ಬಂದಿವೆ. ಹೀಗಾಗಿ ಈ ವಿಚಾರಣೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಸರ್ಕಾರದ ನ್ಯಾಯಾಂಗ ವ್ಯವಹಾರಗಳ ಇಲಾಖೆ ಇದೇ ವರ್ಷ ಗೂಗಲ್ ವಿರುದ್ಧ ಅಪನಂಬಿಕೆ ವಿಚಾರವಾಗಿ ಕೇಸು ದಾಖಲಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಜಾಹೀರಾತು ತಂತ್ರಜ್ಞಾನ, ಸರ್ಚ್ ಎಂಜಿನ್ ಮಾರುಕಟ್ಟೆಯಲ್ಲಿ ಗೂಗಲ್ ಹೊಂದಿರುವ ನಿಯಂತ್ರಣ, ವಾಣಿಜ್ಯ ಚಟುವಟಿಕೆಗಳು ಮತ್ತು ಸಣ್ಣ ಪುಟ್ಟ ಕಂಪನಿಗಳನ್ನು ಫೇಸ್ ಬುಕ್ ಸ್ವಾಧೀನಪಡಿಸಿಕೊಳ್ಳುವ ವಿಚಾರವಾಗಿಯೂ ತನಿಖೆ ನಡೆಯುತ್ತಿದೆ.
ಅಮೆಜಾನ್‌ನ ಜೆಫ್ ಬೆಜೋಸ್ ಅವರು ಇದೇ ಮೊದಲ ಬಾರಿಗೆ ಅಮೆರಿಕದ ಕಾಂಗ್ರೆಸ್ ವಿಚಾರಣಾ ಸಮಿತಿ ಎದುರು ಹಾಜರಾಗುತ್ತಿದ್ದಾರೆ. ಈ ಹಿಂದೆ ಮಾರ್ಕ್ ಜುಕರ್ ಬರ್ಗ್, ಸುಂದರ್ ಪಿಚೈ, ಟಿಮ್ ಕುಕ್ ಕ್ಯಾಪಿಟಲ್ ಹಿಲ್‌ನಲ್ಲಿರುವ ಅಮೆರಿಕ ಸಂಸತ್ ಸಮಿತಿ ಎದುರು ಹಾಜರಾಗಿದ್ದರು.
ಅಮೆರಿಕದ ಕಾನೂನು ರಚನೆಕಾರರು, ಈ ತಂತ್ರಜ್ಞಾನ ದಿಗ್ಗಜ ಕಂಪನಿಗಳ ಪ್ರತಿಯೊಂದು ವ್ಯವಹಾರಗಳ ಬಗೆಗೂ ಗಮನಹರಿಸುತ್ತಿದ್ದಾರೆ. ಅಮೆಜಾನ್ ಇ- ಕಾಮರ್ಸ್ ಮೂಲಕ ವಿವಿಧ ಬ್ರ್ಯಾಂಡುಗಳ ಉತ್ಪನ್ನಗಳನ್ನು ಮಾರಾಟ ಮಾಡುವುದರ ಬಗೆಗೂ ಸಂಸತ್ ಸದಸ್ಯರು ಈ ಹಿಂದೆ ಸಾಕಷ್ಟು ಸಂಶಯಗಳನ್ನು ಹೊಂದಿದ್ದರು. ಗೂಗಲ್‌ನ ಲಾಭದಾಯಕ ಜಾಹೀರಾತು ವ್ಯವಹಾರಗಳ ಬಗ್ಗೆ ಅಮೆರಿಕ ಸಂಸತ್ತು ಗಮನ ಕೇಂದ್ರೀಕರಿಸಿದೆ. ಆ್ಯಪ್ ಸ್ಟೋರ್ ಹೇಗೆ ಸಾಫ್ಟ್‌ವೇರ್ ಡೆವಲಪರ್‌ಗಳ ಹಿತಾಸಕ್ತಿಯನ್ನು ಕುಂದಿಸಿದೆ ಎಂಬುದನ್ನು ಆ್ಯಪಲ್ ಕಂಪನಿಯ ಕಾನೂನು ರಚನೆಕಾರರು ಪ್ರಶ್ನಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಫೇಸ್‌ಬುಕ್ ಈ ಹಿಂದೆ ಸ್ವಾಧೀನಪಡಿಸಿಕೊಂಡ ಸ್ವಾಧೀನ ಪ್ರಕ್ರಿಯೆಯ ಬಗೆಗೂ ಸಾಕಷ್ಟು ಸಂಶಯಗಳೆದ್ದಿವೆ.
ಮಾರುಕಟ್ಟೆ ಮೌಲ್ಯದ ವಿಚಾರದಲ್ಲಿ ನೋಡುವುದಾದರೆ ಆ್ಯಪಲ್, ಅಮೆಜಾನ್, ಅಲ್ಫಾಬೆಟ್ ಹಾಗು ಫೇಸ್ ಬುಕ್ ಜಗತ್ತಿನ ಪ್ರಮುಖ ಐದು ಕಂಪನಿಗಳ ಸಾಲಿನಲ್ಲಿ ನಿಲ್ಲುತ್ತವೆ. ಆದರೆ ಐದನೇ ಕಂಪನಿ ಮೈಕ್ರೋಸಾಫ್ಟ್ ಅನ್ನು ಇತ್ತೀಚೆಗಿನ ವರ್ಷಗಳಲ್ಲಿ ಈ ರೀತಿಯ ಸಾರ್ವಜನಿಕ ವಿಚಾರಣೆಗೆ ಒಳಪಡಿಸಲಾಗಿಲ್ಲ.