ಮುಂಬೈ: ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ಸಿಲುಕಿ ಆರ್ಥಿಕತೆಯು ಕುಸಿದಿದ್ದು, ಬಿಲಿಯನೇರ್ ಬ್ಯಾಂಕರ್ ಉದಯ್ ಕೋಟಕ್ ಅವರು 2020-21ರ ಆರ್ಥಿಕ ವರ್ಷದಲ್ಲಿ ಕೇವಲ 1 ರೂ. ಸಂಬಳ ಪಡೆಯಲು ನಿರ್ಧರಿಸಿದ್ದಾರೆ.
ಖಾಸಗಿ ವಲಯದ ಸಾಲದಾತ ಕೋಟಕ್ ಮಹೀಂದ್ರಾ ಬ್ಯಾಂಕ್ನ ನಾಯಕತ್ವದ ಮೇಲಾಧಿಕಾರಿಗಳು ಸಹ ತಮ್ಮ ವೇತನದಲ್ಲಿ ಶೇ 15ರಷ್ಟು ಕಡಿತ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಬ್ಯಾಂಕ್ ಪ್ರಕಟಣೆಯ ಮೂಲಕ ತಿಳಿಸಿದೆ.
ಭಾರತದ ಈಗಾಗಲೇ ಆರ್ಥಿಕ ಕುಸಿತದ ಬೆಳವಣಿಗೆಯು ಆರಂಭವಾಗಿದೆ. 2021ರ ಹಣಕಾಸು ವರ್ಷದಲ್ಲಿ ಬೆಳವಣಿಗೆ ದರವು ಶೇ 1.5ಕ್ಕೆ ಇಳಿಯಲಿದೆ ಎನ್ನಲಾಗುತ್ತಿದೆ. ಇದು ಬ್ಯಾಂಕಿಂಗ್ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಉದಯ್ ಕೋಟಕ್ ಅವರು 2019ರಲ್ಲಿ 27 ಲಕ್ಷ ರೂ. ವೇತನ ಪಡೆದಿದ್ದರು.
ಉದಯ್ ಕೋಟಕ್ ಮತ್ತು ಬ್ಯಾಂಕ್ ಈಗಾಗಲೇ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರದ ಪರಿಹಾರ ಫಂಡ್ಗೆ 60 ಕೋಟಿ ರೂ. ನೀಡಿದೆ.
ನಾವು ಜೀವನ ಮತ್ತು ಜೀವನೋಪಾಯ ರಕ್ಷಿಸುವ ಯುದ್ಧದ ಮಧ್ಯದಲ್ಲಿದ್ದೇವೆ. ವಿತ್ತೀಯ ಪುನರುಜ್ಜೀವನವು ಆರೋಗ್ಯಕರ ಮತ್ತು ದೃಢವಾದ ಆರ್ಥಿಕ ಕ್ಷೇತ್ರವನ್ನು ಅವಲಂಬಿಸಿರುತ್ತದೆ. ಮುಂದೆ ಬರಲಿರುವ ಕಠಿಣ ದಿನಗಳಲ್ಲಿ ಸರ್ಕಾರ, ಖಾಸಗಿ ಉದ್ಯಮ, ನಾಗರಿಕ ಸಮಾಜ ಮತ್ತು ಜನರೊಂದಿಗೆ ಕೆಲಸ ಮಾಡಲು ಬ್ಯಾಂಕ್ ಬದ್ಧವಾಗಿದೆ ಎಂದು ತಿಳಿಸಿದೆ.