ನವದೆಹಲಿ : ಡೆಲ್ ಹಾಗೂ ಮೈಂಡ್ ಟ್ರೀ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಇಬ್ಬರೂ ಟೆಕ್ಕಿಗಳಿಗೆ ಕೊರೊನಾ ವೈರಸ್ ಇರುವಿಕೆ ದೃಢಪಟ್ಟಿದೆ ಎಂದು ಉಭಯ ಕಂಪನಿಗಳು ಪ್ರಕಟಣೆಯಲ್ಲಿ ತಿಳಿಸಿವೆ.
ಡೆಲ್ ಕಂಪನಿಯ ಉದ್ಯೋಗಿ ಒಬ್ಬರು ಅಮೆರಿಕಾದ ಟೆಕ್ಸಾಸ್ಗೆ ಭೇಟಿ ನೀಡಿ ಬಂದಿದ್ದು, ಅವರಿಗೂ ಸೋಂಕು ತಗುಲಿರುವುದು ಪತ್ತೆಯಾಗಿದೆ. ಮೈಂಡ್ ಟ್ರೀಯ ನೌಕರ ಸಹ ವಿದೇಶಕ್ಕೆ ಭೇಟಿ ನೀಡಿದ್ದಾರೆ. ಅವರಿಗೂ ಕೋವಿಡ್-19 ಇರುವಿಕೆ ಪರೀಕ್ಷೆಯಿಂದ ತಿಳಿದು ಬಂದಿದೆ ಎಂದು ಎರಡೂ ಕಂಪನಿಗಳು ಪ್ರತ್ಯೇಕ ಪ್ರಕಟಣೆಯಲ್ಲಿ ಹೇಳಿವೆ.
ಅಮೆರಿಕಾದ ಟೆಕ್ಸಾಸ್ನಲ್ಲಿರುವ ರೌಂಡ್ ಕ್ಲಾಕ್ ಮುಖ್ಯ ಕಚೇರಿಗೆ ಇಬ್ಬರು ಉದ್ಯೋಗಿಗಳು ಭೇಟಿ ನೀಡಿದ್ದರು. ಇಬ್ಬರನ್ನೂ ಕೋವಿಡ್ 19 ಪರೀಕ್ಷೆಗೊಳಪಡಿಸಿದ್ದೆವು. ಅವರಲ್ಲಿ ಓರ್ವನಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ಇನ್ನೋರ್ವನಿಗೆ ಋಣಾತ್ಮಕ ವರದಿ ಬಂದಿದೆ ಎಂದು ಡೆಲ್ ಹೇಳಿದೆ.
ಸಾಗರೋತ್ತರ ಪ್ರವಾಸ ಹೋಗಿದ್ದ ಉದ್ಯೋಗಿಯನ್ನು ಮಾರ್ಚ್ 9ರಂದು ಕೋವಿಡ್-19 ಪರೀಕ್ಷೆಗೊಳಪಡಿಸಿದ್ದೆವು. ಅವರಿಗೆ ಸೋಂಕು ಇರುವುದು ಖಚಿತವಾಗಿದೆ. ಉದ್ಯೋಗಿ ಹಾಗೂ ಅವರ ಕುಟುಂಬಸ್ಥರನ್ನು ವೈದ್ಯಕೀಯ ಕಣ್ಗಾವಲಿನಲ್ಲಿರಿಸಲಾಗಿದೆ. ಎಲ್ಲ ವಿಧದ ವೈದ್ಯಕೀಯ ಚಿಕಿತ್ಸೆಯನ್ನೂ ಕೊಡಿಸಲಾಗುತ್ತಿದೆ. ಸೋಂಕಿತನು ಸ್ವಇಚ್ಛೆಯಿಂದ ಮೈಂಡ್ ಟ್ರೀ ಕಚೇರಿಗೆ ಭೇಟಿ ನೀಡುವುದಾಗಲಿ ಅಥವಾ ಯಾರನ್ನೂ ಭೇಟಿ ಮಾಡುವುದಾಗಲಿ ಮಾಡಿಲ್ಲ ಎಂದು ಕಂಪನಿಯು ಹೇಳಿದೆ.