ನವದೆಹಲಿ: ಭಾರತದ ಸಾಫ್ಟ್ವೇರ್ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ನ (ಟಿಸಿಎಸ್) ಷೇರು ಮೌಲ್ಯ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ್ದು, ಮಾರುಕಟ್ಟೆಯ ಬಂಡವಾಳ ಮೌಲ್ಯ 11 ಲಕ್ಷ ಕೋಟಿ ರೂ. ದಾಟಿದೆ.
ಮಧ್ಯಂತರ ವಹಿವಾಟಿನಂದು ಷೇರು ದರ ಶೇ 1ಕ್ಕಿಂತ ಅಧಿಕ ಏರಿಕೆಯಾದ ನಂತರ ಟಿಸಿಎಸ್ ಷೇರು ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿತು. ಐಟಿ ಷೇರು ಮೊದಲ ಬಾರಿಗೆ 11 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಮಾರುಕಟ್ಟೆ ಬಂಡವಾಳ ಹೊಂದಿದ್ದು, ಪ್ರತಿ ಷೇರಿನ ಮೇಲೆ ಶೇ 1.42ರಷ್ಟು ದರ ಏರಿಕೆಯಿಂದ 2,949.40 ರೂ.ಗೆ ತಲುಪಿದೆ. ಒಟ್ಟಾರೆ ಮಾರುಕಟ್ಟೆ ಬಂಡವಾಳ 11.02 ಲಕ್ಷ ಕೋಟಿ ರೂ. ದಾಟಿದೆ.
ದಿನದ ಅಂತ್ಯದಲ್ಲಿ ಷೇರು ಮೌಲ್ಯ ಶೇ 0.68ರಷ್ಟು ಅಥವಾ 19.80 ರೂ. ಹೆಚ್ಚಳವಾಗಿ 2,928 ರೂ.ಗೆ ಸ್ಥಿರವಾಯಿತು. ಕಳೆದ 4 ದಿನಗಳಲ್ಲಿ ಷೇರು ಮೌಲ್ಯ ಶೇ 4ರಷ್ಟು ಗಳಿಕೆ ಕಂಡಿದೆ. ಟಿಸಿಎಸ್ ಷೇರು ವಹಿವಾಟಿನ 5 ದಿನ, 20 ದಿನ, 50 ದಿನ, 100 ದಿನ ಮತ್ತು 200 ದಿನಗಳ ಸರಾಸರಿಗಿಂತ ಈ ನಾಲ್ಕು ದಿನಗಳಲ್ಲಿ ವೇಗವಾಗಿ ಏರಿಕೆ ಕಂಡಿದೆ. ಪೇಟೆಯ ಅತಿದೊಡ್ಡ ಬಂಡವಾಳ ಸ್ಟಾಕ್ ಟಿಸಿಎಸ್, ಈ ಒಂದು ವರ್ಷದಲ್ಲಿ ಶೇ 33.29ರಷ್ಟು ಗಳಿಕೆ ಕಂಡಿದೆ. ವರ್ಷದ ಆರಂಭದಿಂದ ಶೇ 35.56ರಷ್ಟು ಏರಿಕೆಯಾಗಿ, ಒಂದು ತಿಂಗಳಲ್ಲಿ ಷೇರು ದರ ಶೇ 9.36ರಷ್ಟು ಹೆಚ್ಚಳವಾಗಿದೆ.
ಇದನ್ನೂ ಓದಿ: ವರ್ಷಾಂತ್ಯದ ಕೊನೆ ಸೋಮವಾರ ಗೂಳಿ ಅಬ್ಬರ: ಹಳೇ ದಾಖಲೆ ಧೂಳಿಪಟ!
ಬಿಎಸ್‌ಇನಲ್ಲಿ ತನ್ನ 52 ವಾರಗಳ ಕನಿಷ್ಠ 1,504.40 ರೂ.ಯಿಂದ 1,445.0 ರೂ.ಗೆ ಅಥವಾ ಶೇ 96.08ರಷ್ಟು ಗಳಿಕೆಯಾಗಿದೆ. ಮಾರುಕಟ್ಟೆ ಬಂಡವಾಳ 11.02 ಲಕ್ಷ ಕೋಟಿ ರೂ.ಯಾಗಿದೆ. ಪ್ರಸ್ತುತ, ಮುಖೇಶ್ ಅಂಬಾನಿ ಒಡೆತನದ ಆರ್ಐಎಲ್, ಭಾರತದ ಅತ್ಯಂತ ಮೌಲ್ಯಯುತ ಕಂಪನಿ ಎನಿಸಿದೆ. 12.75 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿದ್ದು, ಇದಕ್ಕೆ ಟಿಸಿಎಸ್ ಪೈಪೋಟಿ ನೀಡುತ್ತಿದೆ.
ಅತಿದೊಡ್ಡ ಐಟಿ ಸೇವಾ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಷೇರುಗಳ ಮರುಖರೀದಿ ಕಾರ್ಯ ಪ್ರಗತಿಯಲ್ಲಿದೆ. ಸಂಸ್ಥೆಯು ಡಿಸೆಂಬರ್ 18ರಂದು ಷೇರುಗಳನ್ನು ಮರುಖರೀದಿ ಮಾಡಲು ಪ್ರಾರಂಭಿಸಿದೆ. 16,000 ಕೋಟಿ ರೂ. ಷೇರು ಮರುಖರೀದಿ ಯೋಜನೆಯು 2021ರ ಜನವರಿ 1ರಂದು ಮುಕ್ತಾಯವಾಗಲಿದೆ.