ಮುಂಬೈ: ಟಾಟಾ ಮೋಟಾರ್ಸ್, ಮಾರುತಿ, ಹೋಂಡಾ ಕಂಪನಿಯ ನವೆಂಬರ್ ತಿಂಗಳ ವಾಹನ ಮಾರಾಟ ಬೆಳವಣಿಗೆಯು ಮತ್ತೆ ಕುಸಿತ ಕಂಡಿದೆ.
ನಿಧಾನಗತಿಯ ಆರ್ಥಿಕತೆಯಿಂದಾಗಿ ಸತತ ಹತ್ತು ತಿಂಗಳು ಮಾರಾಟ ಕುಸಿತ ದಾಖಲಿಸಿತ್ತು. ಅಕ್ಟೋಬರ್ ತಿಂಗಳಲ್ಲಿನ ಹಬ್ಬದ ಸೀಸ್ನ ಖರೀದಿಯಿಂದ ಉದ್ಯಮವು ತುಸು ಚೇತರಿಕೆ ಕಂಡುಕೊಂಡಿತ್ತು. ಆದರೆ, ನವೆಂಬರ್ ತಿಂಗಳಲ್ಲಿ ಮಾರಾಟ ಬೆಳವಣಿಗೆಯು ಮತ್ತೆ ಇಳಿಕೆ ದಾಖಲಿಸಿದೆ.
ಟಾಟಾ ಮೋಟಾರ್ಸ್, ಮಾರುತಿ, ಹೋಂಡಾ, ಮಹೀಂದ್ರಾ ಕಂಪನಿಗಳ ವಾಹನ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ. ಟಾಟಾ ಮೋಟಾರ್ಸ್ ಪ್ರಯಾಣಿಕ ವಾಹನ ಮಾರಾಟ ಶೇ 39ರಷ್ಟು ಹಾಗೂ ವಾಣಿಜ್ಯ ವಾಹನ ಮಾರಾಟ ಶೇ 19ರಷ್ಟು ಇಳಿಕೆ ದಾಖಲಿಸಿದೆ. ಹೋಂಡಾ ಕಾರ್ಸ್ ಶೇ 50.33ರಷ್ಟು, ಮಹೀಂದ್ರಾ ಶೇ 9ರಷ್ಟು, ಮಾರುತಿ ಶೇ 1.9ರಷ್ಟು ಹಾಗೂ ಹುಂಡೈ ಶೇ 7.2ರಷ್ಟು ಇಳಿಕೆ ಕಂಡಿದೆ.
ಟಾಟಾದ ದೇಶಿ ವಾಹನಗಳ ಮಾರಾಟದಲ್ಲಿ ಶೇ 25ರಷ್ಟು ಇಳಿಕೆ ಕಂಡಿದೆ. ಕಳೆದ ವರ್ಷದ ಇದೇ ತಿಂಗಳಲ್ಲಿ 50,470 ವಾಹನಗಳು ಮಾರಾಟ ಆಗಿದ್ದರೇ ಈ ವರ್ಷ 38,057 ವಾಹನಗಳು ಖರೀದಿ ಆಗಿವೆ. ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ 17ರಷ್ಟು ಇಳಿಕೆ ಇದೆ. ಕಳೆದ ವರ್ಷದ ನವೆಂಬರ್ನಲ್ಲಿ 33,488 ವಾಹನಗಳು ಖರೀದಿ ಆಗಿದ್ದರೇ ಈ ವರ್ಷದ ಇದೇ ಅವಧಿಯಲ್ಲಿ 27,657 ವಾಹನಗಳು ಮಾರಾಟ ಆಗಿವೆ.