ನವದೆಹಲಿ : ಬಜೆಟ್ ಪ್ರಯಾಣಿಕರ ವಾಹಕ ಸ್ಪೈಸ್ ಜೆಟ್ ತನ್ನ ಅಂತಾರಾಷ್ಟ್ರೀಯ ಸರಕು ಸೇವಾ ಜಾಲಕ್ಕೆ ಸುಲೈಮಾನಿಯಾ (ಇರಾಕ್), ಅಲ್ಮಾಟಿ ಮತ್ತು ದೋಹಾ ಸೇರ್ಪಡೆ ಮಾಡಿಕೊಂಡಿದೆ.
ಸೋಮವಾರ ವಿಮಾನಯಾನ ಸಂಸ್ಥೆಯು ಮುಂಬೈಯಿಂದ ದೋಹಾಕ್ಕೆ ಎರಡು ಸರಕು ಹಾರಾಟ ನಡೆಸಿದ್ದು, 20 ಟನ್‌ಗಳಷ್ಟು ಔಷಧ, ತ್ವರಿತ ಹಾಳಾಗುವ ವಸ್ತುಗಳು ಮತ್ತು ಇತರೆ ಸರಕುಗಳನ್ನು ಸಾಗಿಸಿದೆ.
ದೆಹಲಿಯಿಂದ ಅಲ್ಮಾಟಿಗೆ 14 ಟನ್‌ಗಳಷ್ಟು ಫಾರ್ಮಾ ಮತ್ತು ಸರಕು ಸರಬರಾಜುಗಳನ್ನು ವಿಮಾನಯಾನ ಸಂಸ್ಥೆ ಸಾಗಿಸಿದ್ದು, ಶಾರ್ಜಾದಿಂದ ಸುಲೈಮಾನಿಯಾಗೆ ಸುಮಾರು 17ಟನ್ ಸರಕು ಮತ್ತು ಪರಿಹಾರ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿದೆ. ಈ ಎಲ್ಲಾ ಸರಕುಗಳ ಸಾಗಣೆಗೆ ವಿಮಾನಯಾನವು ತನ್ನ ಬೋಯಿಂಗ್ 737 ಸರಕು ವಿಮಾನ ನಿಯೋಜಿಸಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ರಾಷ್ಟ್ರವ್ಯಾಪಿ ಲಾಕ್‌ಡೌನ್ ಆರಂಭ ಆದಾಗಿನಿಂದ ವಿಮಾನಯಾನವು 2,160ಕ್ಕೂ ಹೆಚ್ಚು ವಿಮಾನಗಳಲ್ಲಿ 15,200 ಟನ್‌ಗಳಷ್ಟು ಸರಕು ಸಾಗಿಸಿದೆ. ಸ್ಯಾನಿಟೈಸರ್, ಫೇಸ್ ಮಾಸ್ಕ್ ಸೇರಿದಂತೆ ಇತರೆ ಔಷಧಿ ಸರಕುಗಳು ಇದರಲ್ಲಿ ಸೇರಿವೆ ಎಂದು ಹೇಳಿದೆ.