ನವದೆಹಲಿ: ರಾಷ್ಟ್ರದಲ್ಲಿ ಈಗ ಆರ್ಥಿಕ ಹಿಂಜರಿತವಿದೆ. ಸತತವಾಗಿ ಜಿಡಿಪಿ ಕುಸಿಯುತ್ತಿದೆ. ಪರಿಣಾಮ ಗ್ರಾಹಕರಿಲ್ಲದೇ ವಾಹನೋದ್ಯಮ ಸೊರಗಿದೆ. 2019ರಲ್ಲಿ ವಾಹನಗಳ ಮಾರಾಟದಲ್ಲಿ ಭಾರಿ ಕುಸಿತ ಕಂಡು ಬಂದಿದೆ. ಇಷ್ಟೆಲ್ಲ ಬೆಳವಣಿಗೆಗಳ ನಡುವೆ ಕೆಲ ಕಂಪನಿಗಳು ತನ್ನ ಉತ್ಪನ್ನಗಳ ದರ ಏರಿಕೆ ಮಾಡಲು ನಿರ್ಧರಿಸಿವೆ.
ದೇಶದ ಅತಿದೊಡ್ಡ ಕಾರು ತಯಾರಿಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ, ಜನವರಿ ತಿಂಗಳಿಂದ ತನ್ನ ಎಲ್ಲ ವಿಧದ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ತಿಳಿಸಿದೆ.
ಕಳೆದ ವರ್ಷದಲ್ಲಿನ ವಿವಿಧ ವಾಹನಗಳ ತಯಾರಿಕಾ ವೆಚ್ಚಗಳ ಹೆಚ್ಚಳದಿಂದಾಗಿ ಕಂಪನಿಯ ವಾಹನಗಳ ಮಾರಾಟದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಮಾರುತಿ ಸುಜುಕಿ ಇಂಡಿಯಾ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.
ತಯಾರಿಕೆಯ ಹೆಚ್ಚುವರಿ ವೆಚ್ಚದ ಪರಿಣಾಮಗಳಿಂದಾಗಿ 2020ರ ಜನವರಿಯಿಂದ ವಿವಿಧ ಮಾದರಿಗಳ ಕಾರುಗಳ ದರದಲ್ಲಿ ಬೆಲೆ ಹೆಚ್ಚಳವಾಗಲಿದ್ದು, ಗ್ರಾಹಕರು ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದೆ.
ಪ್ರಸ್ತುತ, ಸಣ್ಣ ಮಟ್ಟದ ಆಲ್ಟೊದಿಂದ ಪ್ರಿಮಿಯಂ ಎಕ್ಸ್‌ಎಲ್ ಕಾರುವರೆಗಿನ ₹ 2.89 ಲಕ್ಷದಿಂದ ₹ 11.47 ಲಕ್ಷದವರೆಗಿನ (ಎಕ್ಸ್ ಶೋ ರೂಂ ದೆಹಲಿ) ದರದಲ್ಲಿ ವ್ಯತ್ಯಾಸ ಆಗಲಿದೆ.