ಬೆಂಗಳೂರು : ಇನ್ಫೋಸಿಸ್ ಸಹ-ಸಂಸ್ಥಾಪಕ ಎಸ್‌ಡಿ ಶಿಬುಲಾಲ್ ಅವರ ಕುಟುಂಬ ಸದಸ್ಯರು ಜುಲೈ 22-24ರಂದು ಕಂಪನಿಯ 85 ಲಕ್ಷ ಷೇರುಗಳು ಮಾರಾಟ ಮಾಡಿದ್ದಾರೆ.
ಶಿಬುಲಾಲ್ ಅವರ ಪುತ್ರ ಶ್ರೇಯಾಸ್ ಅವರು 2020ರ ಜುಲೈ 22, 23 ಮತ್ತು 24ರಂದು 40 ಲಕ್ಷ ಷೇರು ಮಾರಾಟ ಮಾಡಿದ್ದಾರೆ. ಈ ಮಾರಾಟದ ಮುಖೇನ ಷೇರು ವಿನಿಮಯದಲ್ಲಿ ಇನ್ಫೋಸಿಸ್ ಲಿಮಿಟೆಡ್ನಲ್ಲಿ ಶೇ 0.09 ಪ್ರತಿನಿಧಿಸಲಿದ್ದಾರೆ ಎಂದು ಕಂಪನಿಯು ವಿನಿಮಯ ಫೈಲಿಂಗ್ನಲ್ಲಿ ತಿಳಿಸಿದೆ.
ಈ ಹಿಂದೆ ಇನ್ಫೋಸಿಸ್ನಲ್ಲಿ ಶೇ 0.66ಷೇರುಗಳನ್ನು ಹೊಂದಿದ್ದರು. ಈ ವಹಿವಾಟಿನ ಬಳಿಕ ಅವರ ಹಿಡುವಳಿ ಶೇ 0.56ಕ್ಕೆ ಇಳಿದಿದೆ ಎಂದು ಹೇಳಿದೆ. ಇನ್ಫೋಸಿಸ್ ಸಹ ಸಂಸ್ಥಾಪಕರ ಅಳಿಯ ಗೌರವ್ ಮಂಚಂದಾ 18 ಲಕ್ಷ ಷೇರುಗಳನ್ನು (ಶೇ0.04ರಷ್ಟು) ಮಾರಾಟ ಮಾಡಿದ್ದಾರೆ. ಮೊಮ್ಮಗ ಮಿಲನ್ ಶಿಬುಲಾಲ್ ಮಂಚಂದಾ ಅವರ ಬಳಿ ಇದ್ದ 15 ಲಕ್ಷ ಷೇರುಗಳನ್ನು (ಶೇ.0.03ರಷ್ಟು) ಅದೇ ದಿನಾಂಕಗಳಲ್ಲಿ ಆಫ್‌ಲೋಡ್ ಮಾಡಲಾಗಿದೆ ಐಟಿ ಕಂಪನಿ ತಿಳಿಸಿದೆ.
ಗೌರವ್ ಅವರ ಷೇರು ಈಗ ಶೇ 0.32ರಷ್ಟಿದ್ದರೆ, ಮಿಲನ್ ಶೇ 0.33ರಷ್ಟು ಹೊಂದಿದ್ದಾರೆ. ಎಸ್‌ಡಿ ಶಿಬುಲಾಲ್ ಅವರ ಪತ್ನಿ ಕುಮಾರಿ ಅವರು ಇನ್ಫೋಸಿಸ್‌ನ 12 ಲಕ್ಷ ಷೇರುಗಳನ್ನು (ಶೇ 0.03ರಷ್ಟು) ಮಾರಾಟ ಮಾಡಿದ್ದಾರೆ. ಅವರ ಷೇರುಗಳು ಈಗ ಶೇ 0.22ರಷ್ಟಿದೆ.
ಎಸ್‌ಡಿ ಶಿಬುಲಾಲ್ ಮತ್ತು ಎನ್ ಆರ್ ನಾರಾಯಣಮೂರ್ತಿ ಮತ್ತು ಇತರ ಐದು ಮಂದಿ 1981ರಲ್ಲಿ ಇನ್ಫೋಸಿಸ್ ಸ್ಥಾಪಿಸಿದ್ದರು. ಶಿಬುಲಾಲ್ ಅವರು 2011-2014ರವರೆಗೆ ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಸಿಇಒ ಮತ್ತು ಎಂಡಿ ಆಗುವ ಮೊದಲು ಅವರು 2007-2011ರವರೆಗೆ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದರು.