ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಶಾಖೆಗಳು ಮತ್ತು ಎಟಿಎಂಗಳಿಂದ ಹಣ ಹಿಂಪಡೆಯುವುದು, ಚೆಕ್ ಬುಕ್ ಶುಲ್ಕ, ಹಣ ವರ್ಗಾವಣೆ ಮತ್ತು ಹಣಕಾಸೇತರ ವಹಿವಾಟುಗಳಿಗೆ ನಿಯಮಗಳು ಮತ್ತು ಕಟ್ಟುಪಾಡುಗಳನ್ನು ಬದಲಾಯಿಸಿದೆ.
ಎಸ್‌ಬಿಐನ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ (ಬಿಎಸ್‌ಬಿಡಿ) ಖಾತೆದಾರರಿಗೆ ಅನ್ವಯವಾಗುವ ಈ ನಿಯಮಗಳು 2021ರ ಜುಲೈ 1ರಿಂದ ಜಾರಿಗೆ ಬರಲಿವೆ.
ಮೂಲ ಉಳಿತಾಯ ಬ್ಯಾಂಕ್ ಠೇವಣಿ (ಬಿಎಸ್‌ಬಿಡಿ) ಖಾತೆಯು ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿ ಲಭ್ಯವಿದೆ. ಕನಿಷ್ಠ ಬಾಕಿ ಅಥವಾ ಗರಿಷ್ಠ ಬಾಕಿಗಾಗಿ ಯಾವುದೇ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಎಸ್‌ಬಿಐನಲ್ಲಿ ಬಿಎಸ್‌ಬಿಡಿ ಖಾತೆದಾರರ ಮೂಲ ರುಪೇ ಎಟಿಎಂ-ಕಮ್-ಡೆಬಿಟ್ ಕಾರ್ಡ್‌ಗಳನ್ನು ನೀಡಲಾಗುತ್ತದೆ.
ಓದಿ: 4ನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಉತ್ತಮ, ವಾರ್ಷಿಕ ಕುಸಿತ ಮೈನಸ್ ಶೇ. 7.3ರಷ್ಟು- SBI ವರದಿ
ಹೊಸ ನಿಯಮಗಳ ಪ್ರಕಾರ ನೀವು ಹಣಕಾಸಿನೇತರ ಮತ್ತು ವರ್ಗಾವಣೆ ವಹಿವಾಟುಗಳಿಗೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. 4 ಉಚಿತ ನಗದು ವಿತ್ಡ್ರಾ ವಹಿವಾಟು ಲಭ್ಯವಾಗಲಿವೆ. ಇದಕ್ಕೂ ಹೆಚ್ಚಿನ ಬಳಕೆಗೆ ಯಾವುದೇ ಶಾಖೆಗಳ ಮತ್ತು ಎಟಿಎಂಗಳಲ್ಲಿ ನಗದು ಹಿಂಪಡೆಯುವಿಕೆಗೆ ಜಿಎಸ್ಟಿಯೊಂದಿಗೆ 15 ರೂ. ಪಾವತಿಸಬೇಕಾಗುತ್ತದೆ.
ಎಲ್ಲಾ ಬಿಎಸ್‌ಬಿಡಿ ಖಾತೆದಾರರಿಗೆ ಹಣಕಾಸಿನ ವರ್ಷದಲ್ಲಿ ಮೊದಲ 10 ಚೆಕ್ ಲೀಪ್ಗಳನ್ನು ಉಚಿತವಾಗಿ ನೀಡಲಿದೆ. ಹೊಸ ನಿಯಮಗಳ ಪ್ರಕಾರ, ಬಿಎಸ್‌ಬಿಡಿ ಖಾತೆದಾರರು ಅನ್ವಯವಾಗುವ ಜಿಎಸ್‌ಟಿ ಜೊತೆಗೆ 40 ರೂ. ಪಾವತಿಸಿದರೆ 25 ಲೀಪ್ ಚೆಕ್ ಬುಕ್ ನೀಡಲಾಗುತ್ತದೆ.
ಒಂದು ವೇಳೆ ಗ್ರಾಹಕರು ತುರ್ತು ಚೆಕ್ ಬುಕ್ ಬಯಸಿದರೆ, 10 ಲೀಪ್ಗಳಿಗೆ ಅನ್ವಯವಾಗುವ ಜಿಎಸ್‌ಟಿ ಜೊತೆಗೆ 50 ರೂ. ನೀಡಬೇಕು. ಹಿರಿಯ ನಾಗರಿಕರಿಗೆ ಪಾವತಿ ಚೆಕ್ ಬುಕ್ಗಳಿಗೆ ವಿನಾಯಿತಿ ನೀಡಲಾಗಿದೆ.