ನವದೆಹಲಿ: ರಿಲಯನ್ಸ್ ಕಂಪನಿ ಭಾರತದ ಇತಿಹಾಸದಲ್ಲಿ ಅತಿ ದೊಡ್ಡ ವಿದೇಶಿ ನೇರ ಹೂಡಿಕೆ (ಎಫ್ಡಿಐ) ಸಂಬಂಧ ಸೌದಿ ಮೂಲದ ಕಂಪನಿಯಾದ ಅರಾಮ್ಕೋ ಜೊತೆ ಒಪ್ಪಂದ ಮಾಡಿಕೊಳ್ಳಲಿದ್ದು ಇದು ವಿಶ್ವದಲ್ಲಿ ಅತ್ಯಂತ ಲಾಭದ ಹೂಡಿಕೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅರಾಮ್ಕೋ ಕಂಪನಿಯು ವಿಶ್ವದ ಅತಿ ದೊಡ್ಡ ತೈಲ ಉತ್ಪಾದಿಸುತ್ತಿದ್ದು, ಭಾರತದ ರಿಲಯನ್ಸ್ ಆಯಿಲ್ ಟು ಕೆಮಿಕಲ್ಸ್ ರಿಲಯನ್ಸ್ (ಒಟಿಸಿ) ಜೊತೆಗ ಒಪ್ಪಂದ ಮಾಡಿಕೊಂಡು ತನ್ನ ಶೇ 20ರಷ್ಟು ಪಾಲನ್ನು ಮಾರಾಟ ಮಾಡಲು ಅಂಗೀಕಾರ ನೀಡಿದೆ. ಒಟ್ಟು 5.3 ಲಕ್ಷ ಕೋಟಿ ರೂ. (75 ಶತಕೋಟಿ ಡಾಲರ್) ಮೌಲ್ಯದ ಡೀಲ್ ಇದಾಗಿದ್ದು, ವಿಶ್ವದ ಅತ್ಯಂತ ಲಾಭದಾಯಕ ಹೂಡಿಕೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ಅರಾಮ್ಕೋ, ಸೌದಿ ಅರೇಬಿಯಾದ ರಾಷ್ಟ್ರೀಯ ಪೆಟ್ರೋಲ್ ಮತ್ತು ನೈಸರ್ಗಿಕ ಅನಿಲ ಕಂಪನಿ ಆಗಿದ್ದು, ಜಗತಿನ ಅತಿ ಹೆಚ್ಚು ಆದಾಯದ ಹಾಗೂ ಅತ್ಯಧಿಕ ಲಾಭಗಳಿಸುವ ತೈಲ ಕಂಪನಿಯಾಗಿದೆ. ಇದರ ವಾರ್ಷಿಕ ಆದಾಯ 111.1 ಬಿಲಿಯನ್ ಡಾಲರ್ನಷ್ಟಿದೆ. ಇದು ತಂತ್ರಜ್ಞಾನ ದಿಗ್ಗಜ ಆ್ಯಪಲ್ನ ವಾರ್ಷಿಕ ಆದಾಯಕ್ಕಿಂತ ಎರಡು ಪಟ್ಟು ಅಧಿಕವಾಗಿದೆ.
ಅರಾಮ್ಕೋ ಕಳೆದ ವರ್ಷದಿಂದ ಸಾರ್ವಜನಿಕ ಹೂಡಿಕೆಯತ್ತ ಹೊರಳುತ್ತಿದ್ದು, ದಕ್ಷಿಣ ಕೊರಿಯಾ, ಮಲೇಷ್ಯಾ ಮತ್ತು ಚೀನಾದಲ್ಲಿ ಜಂಟಿ ಉದ್ಯಮಗಳೊಂದಿಗೆ ಪ್ರವೇಶಿಸಿದೆ. ಈಗಾಗಲೇ ಆರ್ಐಎಲ್ ತೈಲದಿಂದ ರಾಸಾಯನಿಕ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಈ ಒಪ್ಪಂದ ಮುಖೇನ ಭಾರತದಲ್ಲಿ ತನ್ನ ಉದ್ಯಮ ಪಡೆ ಸ್ಥಾಪಿಸಲು ಮುಂದಾಗಿದೆ.
ಈ ಒಪ್ಪಂದದ ಪ್ರಕಾರ, ಸೌದಿಯ ಅರಾಮ್ಕೊ ಜಾಮ್ನಗರದಲ್ಲಿರುವ ಆರ್ಐಎಲ್ನ ವಿಶ್ವದ ಅತಿದೊಡ್ಡ ಸಂಸ್ಕರಣಾ ಘಟಕಕ್ಕೆ ನಿತ್ಯ 5,00,000 ಬ್ಯಾರೆಲ್ ಕಚ್ಚಾ ತೈಲವನ್ನು ದೀರ್ಘಾವಧಿವರೆಗೂ ಪೂರೈಸಲಿದೆ. ಇದು ಸದ್ಯ ಪ್ರತಿ ದಿನ 14 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದ್ದು 2030ರ ವೇಳೆಗೆ 20 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ನಿಟ್ಟಿನಲ್ಲಿ ಯೋಜನೆಯನ್ನು ಕಂಪನಿ ರೂಪಿಸಿದೆ.