ನವದೆಹಲಿ: ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್) ಅಧ್ಯಕ್ಷ ಅನಿಲ್ ಅಂಬಾನಿ ವಿರುದ್ಧ ದೆಹಲಿ ಹೈಕೋರ್ಟ್ ತಡೆಹಿಡಿದಿದ್ದ ದಿವಾಳಿತನ ಪರಿಹಾರ ಪ್ರಕ್ರಿಯೆ (ಐಆರ್‌ಪಿ) ಪ್ರಶ್ನಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ) ಸಲ್ಲಿಸಿದ್ದ ಅರ್ಜಿ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ದೆಹಲಿ ಹೈಕೋರ್ಟ್‌ಗೆ ಅಕ್ಟೋಬರ್ 6ರಂದು ಈ ವಿಷಯ ಪರಿಗಣನೆಗೆ ತೆಗೆದುಕೊಳ್ಳುವಂತೆ ನಿರ್ದೇಶಿಸಿತು.
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಎಸ್. ರವೀಂದ್ರ ಭಟ್ ಅವರಿದ್ದ ನ್ಯಾಯಪೀಠವು ಆಗಸ್ಟ್ 27ರಂದು ಹೈಕೋರ್ಟ್ ಜಾರಿಗೆ ತಂದಿರುವ ತಡೆಯಾಜ್ಞೆ ಮಾರ್ಪಾಡು ಮಾಡಲು ಎಸ್‌ಬಿಐಗೆ ಸ್ವಾತಂತ್ರ್ಯ ನೀಡಿತು. ಮೂವರು ನ್ಯಾಯಮೂರ್ತಿಗಳ ಪೀಠವು, ಅನಿಲ್ ಅಂಬಾನಿ ಪ್ರಕರಣದ ಬಗ್ಗೆ ವಾದಿಸಲು ನೀವು ಯಾಕೆ ಹೈಕೋರ್ಟ್‌ಗೆ ಮತ್ತೆ ಹಿಂತಿರುಗಬಾರದು ಎಂದು ಪ್ರಶ್ನಿಸಿತು.
ಆಗಸ್ಟ್ 27ರಂದು ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರಜನೀಶ್ ಭಟ್ನಾಗರ್ ಅವರಿದ್ದ ನ್ಯಾಯಪೀಠ, ದಿವಾಳಿತನ ಮತ್ತು ದಿವಾಳಿತನ ಸಂಹಿತೆಯ (ಐಬಿಸಿ) ಅಡಿಯಲ್ಲಿ ಐಆರ್ಪಿಯನ್ನು ತಡೆಹಿಡಿದಿತ್ತು. ವಿಚಾರಣೆಯು ಅಕ್ಟೋಬರ್ 6ರ ಒಳಗೆ ನಡೆಯಲಿದ್ದು, ಈ ಬಗ್ಗೆ ತಮ್ಮ ನಿಲುವು ತಿಳಿಸುವಂತೆ ಕೇಂದ್ರ, ದಿವಾಳಿತನ ಮತ್ತು ದಿವಾಳಿತನ ಮಂಡಳಿ (ಐಬಿಬಿಐ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ನ್ಯಾಯಾಲಯ ನೋಟಿಸ್ ನೀಡಿತ್ತು.
ಅನಿಲ್ ಅಂಬಾನಿ ಅವರು ಆಗಸ್ಟ್ 2016ರಲ್ಲಿ ಆರ್‌ಕಾಮ್ ಮತ್ತು ರಿಲಯನ್ಸ್ ಇನ್ಫ್ರಾಟೆಲ್ ಲಿಮಿಟೆಡ್ಗೆ (ಆರ್‌ಐಟಿಎಲ್) ಕ್ರಮವಾಗಿ 565 ಕೋಟಿ ರೂ. ಮತ್ತು 635 ಕೋಟಿ ರೂ. ಎಸ್‌ಬಿಐನಿಂದ ಪಡೆದ ಸಾಲಕ್ಕೆ ವೈಯಕ್ತಿಕ ಜಾಮೀನು ನೀಡಿದ್ದರು. ಒಟ್ಟಾರೆ ಬ್ಯಾಂಕ್ 1,200 ಕೋಟಿ ರೂ.ಯಷ್ಟು ಸಾಲ ನೀಡಿತ್ತು.
ಸಾಲ ವಸೂಲಿಗೆ ಅನಿಲ್ ವಿರುದ್ಧ ದಿವಾಳಿ ಪ್ರಕ್ರಿಯೆ ಜಾರಿಗೊಳಿಸಲು ಎಸ್ಬಿಐ ಮುಂದಾಗಿತ್ತು. ಇದಕ್ಕೆ ತಡೆಯೊಡ್ಡಿರುವ ಹೈಕೋರ್ಟ್, ಮುಂದಿನ ವಿಚಾರಣೆಯ ತನಕ ತಮ್ಮ ಸ್ವತ್ತುಗಳು ಅಥವಾ ಕಾನೂನು ಹಕ್ಕುಗಳನ್ನು ಇನ್ನೊಬ್ಬರಿಗೆ ವರ್ಗಾಯಿಸದಂತೆ, ಪರಭಾರೆ ಮಾಡದಂತೆ ಅಥವಾ ವಿಲೇವಾರಿ ಮಾಡದಂತೆ ಕೋರ್ಟ್ ಸೂಚಿಸಿತ್ತು.