ಮುಂಬೈ : ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕಿ ನೀತಾ ಅಂಬಾನಿ ಅವರನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರನ್ನಾಗಿ ಮಾಡುವ ಪ್ರಸ್ತಾಪದ ಸುದ್ದಿ ಸುಳ್ಳು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸ್ಪಷ್ಟನೆ ನೀಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ವಕ್ತಾರರು ಎಎನ್‌ಐ ನ್ಯೂಸ್ ಏಜೆನ್ಸಿಗೆ ಇದೊಂದು ಸುಳ್ಳು ಸುದ್ದಿ. ಬಿಹೆಚ್‌ಯುಗೆ ಭೇಟಿ ನೀಡುವ ಉಪನ್ಯಾಸಕರಾಗಲು ಯಾವುದೇ ಪ್ರಸ್ತಾಪ ಅಥವಾ ಆಹ್ವಾನ ಸ್ವೀಕರಿಸಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮೇಡ್ ಇನ್ ಇಂಡಿಯಾ ಜೋಡಣೆಯ 'ಜೀಪ್ ರಾಂಗ್ಲರ್' ಲಾಂಚ್: ಫೀಚರ್, ದರ ಹೀಗಿದೆ!
ನೀತಾ ಅಂಬಾನಿ ಅವರನ್ನು ಸಂದರ್ಶಕ ಪ್ರಾಧ್ಯಾಪಕರನ್ನಾಗಿ ಮಾಡುವ ಪ್ರಸ್ತಾಪವನ್ನು ವಿರೋಧಿಸಿ ವಿದ್ಯಾರ್ಥಿಗಳು ಮಂಗಳವಾರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸಿದರು ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು.
ಪ್ರತಿಭಟನಾನಿರತ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಶುಭಮ್ ತಿವಾರಿ, ನೀತಾ ಅಂಬಾನಿ ಬದಲಿಗೆ ಮಹಿಳಾ ಸಬಲೀಕರಣಕ್ಕೆ ಉತ್ತಮವಾಗಿ ಕೆಲಸ ಮಾಡಿದವರನ್ನು ಆಹ್ವಾನಿಸಬೇಕು ಎಂದರು.
ನೀತಾ ಅಂಬಾನಿಯನ್ನು ಸಂದರ್ಶಕ ಪ್ರಾಧ್ಯಾಪಕರನ್ನಾಗಿ ಮಾಡುವ ಪ್ರಸ್ತಾಪವನ್ನು ಅಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಮಹಿಳಾ ಅಧ್ಯಯನ ಮತ್ತು ಅಭಿವೃದ್ಧಿ ಕೇಂದ್ರದ ಸಂಯೋಜಕ ಪ್ರೊ.ನಿಧಿ ಶರ್ಮಾ ತಿಳಿಸಿದ್ದಾರೆ.
ಅಂಬಾನಿ ಮಹಿಳಾ ಉದ್ಯಮಿ. ಅವರು ನಮ್ಮ ಕೇಂದ್ರಕ್ಕೆ ಸೇರ್ಪಡೆಯಾದರೆ ಪೂರ್ವಾಂಚಲ್ ಮಹಿಳೆಯರು ಅವರ ಅನುಭವದ ಲಾಭ ಪಡೆಯುತ್ತಾರೆ ಎಂದರು.