ನವದೆಹಲಿ: ಅನಿಲ್ ಅಂಬಾನಿಯ ರಿಲಯನ್ಸ್ ಗ್ರೂಪ್ ಭಾಗವಾಗಿರುವ ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್ (ಆರ್‌ಸಿಎಲ್) 2020ರ ಡಿಸೆಂಬರ್ ಅಂತ್ಯದ ವೇಳೆಗೆ ಬಾಕಿ ಇರುವ ಸಾಲದ ಪ್ರಮಾಣ 20,379.71 ಕೋಟಿ ರೂಪಾಯಿಗಳಿಗೆ ಏರಿದೆ ಎಂದು ಹೇಳಿದೆ.
ಬಡ್ಡಿ ಸೇರಿದಂತೆ ಒಟ್ಟು ಸಾಲ 2020ರ ಆಗಸ್ಟ್ 31ರಂದು 19,805.7 ಕೋಟಿ ರೂ.ಯಷ್ಟಿತ್ತು. ಅಲ್ಪಾವಧಿಯ ಮತ್ತು ದೀರ್ಘಾವಧಿಯ ಸಾಲ ಮತ್ತು ಸಂಚಿತ ಬಡ್ಡಿ ಸೇರಿದಂತೆ ಒಟ್ಟು ಆರ್ಥಿಕ ಋಣಭಾರವು 2020ರ ಡಿಸೆಂಬರ್ ಅಂತ್ಯದ ವೇಳೆಗೆ 20,379.71 ಕೋಟಿ ರೂ.ಗಳಷ್ಟಿದೆ ಎಂದು ರಿಲಯನ್ಸ್ ಕ್ಯಾಪಿಟಲ್ ನಿಯಂತ್ರಕ ಫೈಲಿಂಗ್ನಲ್ಲಿ ತಿಳಿಸಿದೆ.
ಎಚ್‌ಡಿಎಫ್‌ಸಿ ಲಿಮಿಟೆಡ್‌ಗೆ ಬರಬೇಕಾದ ಪ್ರಮುಖ ಮೊತ್ತ 523.98 ಕೋಟಿ ರೂ. ಮತ್ತು ಆಕ್ಸಿಸ್ ಬ್ಯಾಂಕ್‌ಗೆ 100.63 ಕೋಟಿ ರೂ.ಯಷ್ಟಿದೆ. ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಬಾಕಿ ಉಳಿದಿರುವ ಸಾಲದ ಮೊತ್ತವು ಡಿಸೆಂಬರ್ 31ರವರೆಗೆ ಒಟ್ಟು ಬಡ್ಡಿ ಸೇರಿ 700.76 ಕೋಟಿ ರೂ. ಆಗಿದೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ: ಹೊಂದಾಣಿಕೆಯ ಆದಾಯ ಬಾಕಿ ಪಾವತಿ : ಏರ್ಟೆಲ್ ಹಾದಿ ಹಿಡಿದ ವೊಡಾಫೋನ್-ಐಡಿಯಾ
ಇದೇ ಸಮೂಹದ ರಿಲಯನ್ಸ್ ಹೋಮ್ ಫೈನಾನ್ಸ್ ಒಟ್ಟು ಬಾಕಿ ಇರುವ ಸಾಲ 13,000 ಕೋಟಿ ರೂ.ಯಷ್ಟಿದೆ. ಅಲ್ಪಾವಧಿಯ ಮತ್ತು ದೀರ್ಘಾವಧಿಯ ಸಾಲ ಸೇರಿದಂತೆ ಘಟಕದ ಒಟ್ಟು ಹಣಕಾಸಿನ ಋಣಭಾರವು 2020ರ ಡಿಸೆಂಬರ್ 31ರ ಕೊನೆಯಲ್ಲಿ 12,943.18 ಕೋಟಿ ರೂ.ಯಷ್ಟು ಆಗಿತ್ತು.
2002ರಲ್ಲಿ ಧೀರೂಭಾಯಿ ಅಂಬಾನಿ ನಿಧನರಾದಾಗ ರಿಲಯನ್ಸ್ ಕಂಪನಿ 20 ಲಕ್ಷ ಷೇರುದಾರರನ್ನು ಹೊಂದಿತ್ತು. 2005ರಲ್ಲಿ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಆಸ್ತಿ ಹಂಚಿಕೊಂಡರು. 20007ರಲ್ಲಿ ಅನಿಲ್ 3.2 ಲಕ್ಷ ಕೋಟಿ ರೂ. ಹಾಗೂ ಮುಖೇಶ್ 3.5 ಲಕ್ಷ ಕೋಟಿ ರೂ. ಆಸ್ತಿ ಹೊಂದಿದ್ದರು. ಆದರೆ ಯುಕೆ ಕೋರ್ಟ್ಗೆ ಸಲ್ಲಿಸಿದ ಮಾಹಿತಿಯಲ್ಲಿ ಅನಿಲ್ ಆಸ್ತಿ ಶೂನ್ಯಕ್ಕೆ ಇಳಿದಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಕಡೆ ಮುಖೇಶ್ ಅಂಬಾನಿಯ ಆಸ್ತಿ ಪ್ರಮಾಣ 2021ರ ವೇಳೆಗೆ 5.6 ಲಕ್ಷ ಕೋಟಿಗೆ ಏರಿಕೆಯಾಗಿದೆ.