ನವದೆಹಲಿ: ವಜ್ರೋದ್ಯಮಿ ನೀರವ್ ಮೋದಿಯ ಸಾವಿರಾರು ಕೋಟಿ ರೂಪಾಯಿ ವಂಚನೆಯಿಂದ ನಷ್ಟದ ಕೂಪಕ್ಕೆ ಬಿದ್ದಿದ್ದ ಸಾರ್ವಜನಿಕ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಲಾಭದ ಹಾದಿಗೆ ಮರಳಿದೆ.
2020ರ ಆರ್ಥಿಕ ವರ್ಷದ ಮೊದಲನೇ ತ್ರೈಮಾಸಿಕದಲ್ಲಿ ಬ್ಯಾಂಕ್ ವ್ಯವಹಾರದಲ್ಲಿ ಸುಧಾರಣೆ ಕಂಡಿದ್ದು, ಜೂನ್ ತಿಂಗಳಲ್ಲಿ ಬಿಡುಗಡೆಯಾದ ಮಾಹಿತಿ ಅನ್ವಯ, ₹ 1,018 ಕೋಟಿಯಷ್ಟು ನಿವ್ವಳ ಲಾಭ ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್ ₹ 4,749 ಕೋಟಿ ನಷ್ಟಕ್ಕೆ ತುತ್ತಾಗಿತ್ತು. ಮಾರ್ಚ್ ತ್ರೈಮಾಸಿಕದಲ್ಲಿ ನಷ್ಟದ ಮೊತ್ತ ₹ 940 ಕೋಟಿ ಇತ್ತು.
ನಿವ್ವಳ ಬಡ್ಡಿ ಆದಾಯ, ದುರ್ಬಲ ಬಂಡವಾಳ ಅನುಪಾತ ಮತ್ತು ಕೆಲವು ವಂಚನೆಗಳ ನಿಬಂಧನೆಗಳ ಮುಂದೂಡುವಿಕೆಯಿಂದಾಗಿ ಶೇ12 ರಷ್ಟು ಕುಸಿತ ಬ್ಯಾಂಕ್ನ ಗಳಿಕೆಯ ಮೇಲಿನ ಒತ್ತಡವನ್ನು ಸೂಚಿಸುತ್ತದೆ.
ಜೂನ್ ತ್ರೈಮಾಸಿಕದಲ್ಲಿ ವಸೂಲಾಗದ ಸಾಲದ ಪ್ರಮಾಣ ಅಲ್ಪ ಕುಸಿದಿದೆ. ಸುಮಾರು ₹ 77,000 ಕೋಟಿಯಷ್ಟು ಇರುವ ವಸೂಲಾಗದ ಸಾಲದ ಪ್ರಮಾಣ ಕಳವಳಕಾರಿ ಬೆಳವಣಿಗೆಯಾಗಿದೆ. ಒಟ್ಟು ವಸೂಲಾಗದ ಸಾಲ ಪ್ರಮಾಣ (ಜಿಎನ್ಪಿಎ) ಮಾರ್ಚ್ನಲ್ಲಿ ಶೇ15.5ರಷ್ಟು ಇದ್ದ ದ್ದು, ಜೂನ್ಗೆ ಶೇ 16.5ರಷ್ಟಾಗಿದೆ.