ನವದೆಹಲಿ: ಚೀನಾ ಮೂಲದ ಕಂಪನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗೆ ಒಳಗಾಗುತ್ತಿವೆ. ಈ ಮಧ್ಯೆ ಅಮೆರಿಕ ಮೂಲದ ವಿಡಿಯೋ ಮೀಟಿಂಗ್ ಪ್ಲಾಟ್‌ಫಾರ್ಮ್ ಝೂಮ್, 'ಮುಂದಿನ ಐದು ವರ್ಷಗಳಲ್ಲಿ ದೇಶದ ಸ್ಥಳೀಯ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಯೋಜಿಸಲಾಗಿದೆ ಮತ್ತು ನಿರಂತರವಾಗಿ ಇದಕ್ಕಾಗಿ ಹೂಡಿಕೆ ಮಾಡಲಾಗುತ್ತದೆ' ಎಂದು ಸ್ಪಷ್ಟನೆ ನೀಡಿದೆ.
ಝೂಮ್‌ನಲ್ಲಿ ಎಂಜಿನಿಯರಿಂಗ್ ಮತ್ತು ಉತ್ಪನ್ನಗಳ ಅಧ್ಯಕ್ಷರಾಗಿರುವ ವೆಲ್ಚಾಮಿ ಶಂಕರ್ಲಿಂಗಂ ಅವರು, ಭಾರತವು ಝೂಮ್‌ನ ಪ್ರಮುಖ ಮಾರುಕಟ್ಟೆಯಾಗಿ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಭಾರತೀಯ ಮಾರುಕಟ್ಟೆಗೆ ಪರಿಚಯವಾಗಿ ಮುಂದುವರಿಯುತ್ತಿದ್ದಂತೆ ಝೂಮ್‌ಗೆ ಸಂಬಂಧಿಸಿದ ಸತ್ಯಗಳ ಬಗ್ಗೆ ಕೆಲವು ಗೊಂದಲಗಳು ಸೃಷ್ಟಿ ಆಗಿರುವುದನ್ನು ನಾವು ಗುರುತಿಸಿದ್ದೇವೆ. ಇವುಗಳನ್ನು ಪರಿಹರಿಸಲು ಝೂಮ್ ಕೆಲಸ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.
ಝೂಮ್ ಕಂಪನಿ ಮತ್ತು ಅದರ ಚೀನಾ ಸಂಪರ್ಕದ ಬಗ್ಗೆ ಕೆಲವು ತಪ್ಪುಗ್ರಹಿಕೆಗಳು ಮೂಡಿವೆ. ಝೂಮ್‌ನ ಗುರುತು ಸ್ಪಷ್ಟವಾಗಿದೆ. ಝೂಮ್ ಅಮೆರಿಕ ಕಂಪನಿಯಾಗಿದ್ದು, ನಾಸ್ಡಾಕ್ನಲ್ಲಿ ಸಾರ್ವಜನಿಕವಾಗಿ ವಹಿವಾಟು ನಡೆಸುತ್ತಿದೆ. ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ನಲ್ಲಿ ಸ್ಥಾಪಿತವಾಗಿದ್ದು, ಅಲ್ಲಿಯೇ ಪ್ರಧಾನ ಕಚೇರಿಯನ್ನು ಹೊಂದಿದೆ. ಅನೇಕ ಜಾಗತಿಕ ತಂತ್ರಜ್ಞಾನ ಕಂಪನಿಗಳಂತೆ ಝೂಮ್, ಚೀನಾದಲ್ಲಿ ಅಮೆರಿಕ ಮೂಲ ಕಂಪನಿಯ ಅಂಗ ಸಂಸ್ಥೆಗಳಿಂದ ನಿರ್ವಹಿಸುವ ಕಚೇರಿಗಳನ್ನು ಹೊಂದಿದೆ ಎಂದು ಸ್ಪಷ್ಟನೆ ನೀಡಿದರು.