ನವದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ಹಾಗೂ ವಾಡಿಯಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ನೆಸ್ ವಾಡಿಯಾಗೆ ಜಪಾನ್ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಕಳೆದ ಮಾರ್ಚ್ನಲ್ಲಿ ಜಪಾನಿನ ನ್ಯೂ ಚಿತೊಸೆ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ವಾಡಿಯಾ ಜಾಕೆಟ್ ಜೇಬಿನಲ್ಲಿ ಸುಮಾರು 25 ಗ್ರಾಂನಷ್ಟು ಗಾಂಜಾ ದೊರೆತಿತ್ತು. ಬಂಧನದ ಬಳಿಕ ನಡೆದ ವಿಚಾರಣೆಯಲ್ಲಿ, 'ನನ್ನ ಬಳಿ ಇದ್ದ ಗಾಂಜಾ ವೈಯಕ್ತಿಕ ಬಳಕೆಗಾಗಿಯೇ ಹೊರತು ಮಾರಾಟ ಮಾಡುವ ಉದ್ದೇಶ ಇಲ್ಲ' ಎಂದು ವಾಡಿಯಾ ಸ್ಪಷ್ಟನೆ ಕೊಟ್ಟಿದ್ದರು. ಇಷ್ಟು ದಿನಗಳ ನ್ಯಾಯಾಂಗ ಬಂಧನದ ಬಳಿಕ ಸಪ್ಪೊರೊ ಜಿಲ್ಲಾ ನ್ಯಾಯಾಲಯ ವಾಡಿಯಾ ಅವರಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ ಎಂದು ಜಪಾನ್ನ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
2020ರಲ್ಲಿ ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯವನ್ನು ಜಪಾನ್ ವಹಿಸಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮಾದಕ ವಸ್ತು ಕಾಯ್ದೆಯನ್ನು ಜಪಾನ್ನಲ್ಲಿ ಮತ್ತಷ್ಟು ಕಠಿಣಗೊಳಿಸಲಾಗಿದೆ. ಜಪಾನಿನಲ್ಲಿ ಹಿಂದಿನಿಂದಲೂ ಮಾದಕ ವಸ್ತುಗಳ ಬಳಕೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ.