ವಾಷಿಂಗ್ಟನ್: ಇ- ಕಾಮರ್ಸ್ ದೈತ್ಯ ಅಮೆಜಾನ್ ಸಂಸ್ಥಾಪಕ/ ವಿಶ್ವದ ಆಗರ್ಭ ಶ್ರೀಮಂತರಲ್ಲಿ ಒಬ್ಬರಾದ ಜೆಫ್ ಬೆಜೋಸ್ ಅವರು ಪತ್ನಿ ಮೆಕೆಂಜಿ ಬೆಜೋಸ್ ಜೊತೆಗಿನ ದಾಂಪತ್ಯ ಜೀವನ ಕಡಿದುಕೊಂಡಿದ್ದಾರೆ.
ಜೆಫ್ ಬೆಜೋಸ್- ಮೆಕೆಂಜಿ ಬೆಜೋಸ್ ಅವರ ವಿಚ್ಛೇದನ ಜಗತ್ತಿನಲ್ಲಿ ಅತ್ಯಂತ ದುಬಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1993ರಲ್ಲಿ ಮದುವೆಯಾದ ಈ ಜೋಡಿ ಸುದೀರ್ಘ 26 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಜೀವನಾಂಶವಾಗಿ ಮೆಕೆಂಜಿ ಬೆಜೋಸ್ ಅವರು ವಿಚ್ಛೇದಿತ ಪತ್ನಿಗೆ ₹ 2.6 ಲಕ್ಷ ಕೋಟಿ ( 38 ಬಿಲಿಯನ್ ಡಾಲರ್) ನೀಡಲಿದ್ದಾರೆ.
ಈ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ವಿಚ್ಛೇದನ ಪಡೆದುಕೊಂಡ ಬಳಿಕ 49 ವರ್ಷದ ಮೆಕೆಂಜಿ ವಿಶ್ವದ 4ನೇ ಅತಿ ಶ್ರೀಮಂತ ಮಹಿಳೆ ಎಂದೆನಿಸಿಕೊಳ್ಳಲಿದ್ದಾರೆ.
ಪರಿಹಾರದ ಮೊತ್ತದಲ್ಲಿ ಕನಿಷ್ಠ ಅರ್ಧದಷ್ಟು ಹಣವನ್ನು ಸಾಮಾಜಿಕ ಕಾರ್ಯಕ್ಕೆ ಬಳಸುವುದಾಗಿ ಮೆಕೆಂಜಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಜೆಫ್ ಬೆಜೋಸ್, 'ಮೆಕೆಂಜಿ ತನ್ನ ಪಾಲಿಗೆ ಬರಲಿರುವ ಮೊತ್ತವನ್ನು ಸಾಮಾಜ ಮುಖಿಯಂತಹ ಮಹತ್ವದ ಕಾರ್ಯಗಳಿಗೆ ವಿನಿಯೋಗಿಸುವುದು ಅರ್ಥಪೂರ್ಣ, ಪರಿಣಾಮಕಾರಿ ಹಾಗೂ ಅದ್ಭುತವಾಗಿದೆ. ನಾನು ಅವಳ ಬಗ್ಗೆ ಹೆಮ್ಮೆ ಪಡುತ್ತೇನೆ. ಅವಳ ಪತ್ರ ತುಂಬ ಚೆನ್ನಾಗಿದೆ' ಎಂದು ಶ್ಲಾಘಿಸಿದ್ದಾರೆ.