ನವದೆಹಲಿ: ಮಾರಾಟ ಬೆಳವಣಿಗೆ ಕುಸಿತದಿಂದ ತಪ್ಪಿಸಿಕೊಳ್ಳಲು ಮಹೀಂದ್ರ & ಮಹೀಂದ್ರ ಆಟೋಮೊಬೈಲ್ ಕಂಪನಿಯು ಚಂದಾದಾರಿಕೆ ಆಧಾರಿತ ಕಾರುಗಳ ಸೇವೆ ಒದಗಿಸಲಿದೆ.
ಹಲವು ಶ್ರೇಣಿಯ ವಾಹನಗಳು ಚಿಲ್ಲರೆ ಖರೀದಿದಾರರಿಗೆ ಚಂದಾದಾರಿಕೆ ಆಧಾರಿತ ಸೇವೆಯಡಿ ಸುಲಭವಾಗಿ ಕಾರು ಪಡೆಯಬಹುದಾಗಿದೆ. ಈ ಯೋಜನೆಯು ಜಿರೋ ಡೌನ್ ಪೇಮೆಂಟ್, ರಸ್ತೆ ತೆರಿಗೆ ರಹಿತ, ಮರುಮಾರಾಟ ಮೌಲ್ಯದ ಮೇಲೆ ಯಾವುದೇ ಅಪಾಯವಿರುವುದಿಲ್ಲ. ಸಾಮಾನ್ಯ ದರ ನಿಗದಿಯಂತೆ ನಿರ್ವಹಣೆ ವೆಚ್ಚ ಕೂಡ ಒಳಗೊಂಡಿರುತ್ತದೆ ಎಂದು ಕಂಪೆನಿ ತಿಳಿಸಿದೆ.
ದೆಹಲಿ, ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್, ಕೋಲ್ಕತಾ, ಚಂಡೀಗಢ ಮತ್ತು ಅಹಮದಾಬಾದ್‌ನಲ್ಲಿ ಆರಂಭಿಕ ಹಂತದಲ್ಲಿ ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಆರಂಭಿಕ ಚಂದಾದಾರಿಕೆಯು ಮಾಸಿಕ ₹ 19,720ಯಲ್ಲಿ ಲಭ್ಯವಾಗಲಿದೆ. ಕಿ.ಮೀ ಮಿತಿಯನ್ನು 2,083 ಕಿ. ಮೀ.ಗೆ ನಿಗದಿ ಮಾಡಲಾಗಿದೆ. ಅದರ ಮೇಲೆ ಪ್ರತಿ ಕಿ.ಮೀ.ಗೆ 11 ರೂ. ಹೆಚ್ಚುವರಿ ದರ ವಿಧಿಸಲಾಗುತ್ತದೆ. ಆಸಕ್ತ ಗ್ರಾಹಕರು ರೂ. 20ರಿಂದ 25 ಸಾವಿರದ ತನಕ ರೀಫಂಡಬಲ್ ಡೆಪಾಸಿಟ್ ಪಾವತಿಸಬೇಕಾಗುತ್ತದೆ.
ಚಂದಾದಾರಿಕೆಯಡಿ ಕೆಯುವಿ 100, ಎಕ್ಸ್ಯುವಿ 500, ಎಕ್ಸ್ಯುವಿ 300, ಸ್ಕಾರ್ಪಿಯೋ, ಟಿಯುವಿ 300, ಮರಾಝೋ ಮತ್ತು ಅಲ್ತುರಾಸ್ ಜಿ 4 ನಂತಹ ಕಾರುಗಳು ಲಭ್ಯವಾಗಲಿವೆ. ಚಂದಾದಾರಿಕೆಯು ಒಂದರಿಂದ ನಾಲ್ಕು ವರ್ಷಗಳವರೆಗೆ ಲಭ್ಯವಿರಲಿದೆ ಎಂದು ತಿಳಿಸಿದೆ.