ಮುಂಬೈ: ಜೆಟ್ ಏರ್ವೇಸ್ ಸಂಸ್ಥೆಸುಮಾರು 8 ಸಾವಿರ ಕೋಟಿ ರೂಪಾಯಿ ಸಾಲದ ಸುಳಿಗೆ ಸಿಲುಕಿದೆ. ವಿಮಾನಗಳ ಬಾಡಿಗೆ ಹಣ, ಇಂಧನ ಮೊತ್ತ, ಪೈಲಟ್ ಹಾಗೂ ಸಿಬ್ಬಂದಿ ಬಾಕಿ ವೇತನ ಪಾವತಿಸದೆ ಎಲ್ಲ ವಿಮಾನಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ತುರ್ತು ಹಣಕಾಸಿನ ನೆರವು ಒದಗಿಸಲು ಎಸ್‌ಬಿಐ ನೇತೃತ್ವದಲ್ಲಿ ಸೋಮವಾರ ನಡೆದ ಬ್ಯಾಂಕ್ ಒಕ್ಕೂಟದ ಸಭೆಯು ಒಮ್ಮತದ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಗಿದೆ. ಇದರ ಜೊತೆಗೆ ಸಂಸ್ಥೆಯ ಷೇರು ಖರೀದಿಸದಿರಲು ಅದರ ಸ್ಥಾಪಕ ನರೇಶ್ ಗೋಯಲ್ ನಿರ್ಧರಿಸಿ ಬಿಡ್ನಿಂದ ಹೊರ ಬಂದಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಪ್ರಸ್ತುತ 6-7 ವಿಮಾನಗಳನ್ನು ಕಾರ್ಯಾಚರಣೆಯಲ್ಲಿವೆ. ಈಗ ಜೆಟ್ ಏರ್ವೇಸ್ನ ಎಲ್ಲ ವಿಮಾನಗಳು ತಾತ್ಕಾಲಿಕವಗಿ ಸ್ಥಗಿತಗೊಳ್ಳಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಮತ್ತೆ ವಿಮಾನಗಳ ಹಾರಾಟ ನಡೆಸಿ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಲ ನಿರ್ಣಯ ಯೋಜನೆಯಡಿ ಹೊಸ ಬಂಡವಾಳ ಸಂಗ್ರಹಿಸಬೇಕಿದೆ.
ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರು ಸಚಿವಾಲಯದ ಕಾರ್ಯದರ್ಶಿಗೆ, 'ಹೆಚ್ಚುತ್ತಿರುವ ವಿಮಾನ ಪ್ರಯಾಣಿಕರ ಟಿಕೆಟ್ ದರ, ಪ್ರಯಾಣಿಕರ ಹಕ್ಕು ಮತ್ತು ಸುರಕ್ಷತೆ ಹಾಗೂ ಜೆಟ್ ಏರ್ವೇಸ್ ಸಂಬಂಧಿತ ತೊಡಕುಗಳಿಗೆ ಪರಿಶೀಲನಾ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ'. ನಾಲ್ಕು ದಿನಗಳ ಹಿಂದೆಯೂ ಸಹ ಇದೇ ರೀತಿಯ ಆದೇಶ ನೀಡಿದ್ದರು. ಆದರೂ ಅದು ಫಲಪ್ರದವಾಗಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ.