ಹೊಸದಿಲ್ಲಿ: ಕೋವಿಡ್-19 ನಿಂದಾಗಿ ವಿಶ್ವಾದ್ಯಂತ ಲಾಕ್ಡೌನ್ ಇದ್ದರೂ ಅಮೆಜಾನ್ ಸಂಸ್ಥಾಪಕ ಹಾಗೂ ಸಿಇಒ ಜೆಫ್ ಬೆಜೋಸ್ ಫೋರ್ಬ್ಸ್ ಬಿಲಿಯನೇರ್ಗಳ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇತ್ತೀಚಿನ 34ನೇ ವಾರ್ಷಿಕ ಫೋರ್ಬ್ಸ್ ಜಾಗತಿಕ ಬಿಲಿಯನೇರ್ಗಳ ಪಟ್ಟಿಯ ಪ್ರಕಾರ 113 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಜೆಫ್ ಬೆಜೋಸ್ ವಿಶ್ವದ ನಂ.1 ಶ್ರೀಮಂತರಾಗಿದ್ದಾರೆ. ಇವರ ನಂತರದ ಸ್ಥಾನದಲ್ಲಿ 98 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಬಿಲ್ ಗೇಟ್ಸ್ ಇದ್ದಾರೆ.
76 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಎಲ್ವಿಎಂಎಚ್ ಸಿಇಒ ಮತ್ತು ಚೇರಮನ್ ಬರ್ನಾರ್ಡ್ ಆರ್ನಾಲ್ಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. 67.5 ಬಿಲಿಯನ್ ಡಾಲರ್ ಸಂಪತ್ತಿನ ಒಡೆಯ ವಾರೆನ್ ಬಫೆಟ್ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಜೆಫ್ ಬೆಜೋಸ್ ಅವರ ಮಾಜಿ ಪತ್ನಿ ಮೆಕೆಂಜಿ ಬೆಜೋಸ್ ಈ ಬಾರಿ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಅಚ್ಚರಿ ಮೂಡಿಸಿದೆ. 36 ಬಿಲಿಯನ್ ಡಾಲರ್ ಸಂಪತ್ತಿನ ಒಡತಿಯಾದ ಮಕೆಂಜಿ 22ನೇ ಸ್ಥಾನದಲ್ಲಿದ್ದಾರೆ.
ಇನ್ನುಳಿದಂತೆ ಒರಾಕಲ್ ಸ್ಥಾಪಕ ಹಾಗೂ ಸಿಇಒ ಲ್ಯಾರಿ ಎಲಿಸನ್ (59 ಬಿಲಿಯನ್ ಡಾಲರ್) ವಿಶ್ವದ 5ನೇ ಅತಿ ದೊಡ್ಡ ಶ್ರೀಮಂತರೆನಿಸಿದ್ದಾರೆ. ಕಳೆದ ವರ್ಷ ವಿಶ್ವದ ಎಲ್ಲ ಬಿಲಿಯನೇರ್ಗಳ ಒಟ್ಟು ಸಂಪತ್ತು 8.7 ಟ್ರಿಲಿಯನ್ ಡಾಲರ್ಗಳಷ್ಟಿತ್ತು. ಈ ಬಾರಿ ಇವರ ಒಟ್ಟು ಸಂಪತ್ತು ಕುಸಿದಿದ್ದು 8 ಟ್ರಿಲಿಯನ್ ಡಾಲರ್ಗಳಿಗೆ ಇಳಿದಿದೆ.