ಗ್ರೇಟರ್ ನೋಯ್ಡಾ: ಗ್ರೇಟರ್ ನೋಯ್ಡಾದಲ್ಲಿ ಆರು ದಿನಗಳ ಕಾಲ ನಡೆಯುವ ಆಟೋ ಎಕ್ಸ್ ಪೋ ಆರಂಭಗೊಂಡಿದೆ. ಎಕ್ಸ್‌ಪೋದಲ್ಲಿ ಬಹುತೇಕ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಾನಿಕ್ ವಾಹನಗಳತ್ತ ಒಲವು ವ್ಯಕ್ತಪಡಿಸಿವೆ. ಮತ್ತೆ ಕೆಲವು ಕಂಪನಿಗಳು ಅತ್ಯಾಧುನಿಕ ಸೌಲಭ್ಯಗಳ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ.
ವಿಶೇಷವಾಗಿ ವೋಕ್ಸ್ವ್ಯಾಗನ್, ಟಾಟಾ ಮೋಟಾರ್ಸ್‌ನಂತಹ ಐಷಾರಾಮಿ ಕಾರು ತಯಾರಕರು ಎಸ್ಯುವಿನಂತಹ ಎಲೆಕ್ಟ್ರಿಕ್ ವಾಹನಗಳನ್ನೇ ಅಭಿವೃದ್ಧಿಪಡಿಸಲಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ.
ಮರ್ಸಿಡಿಸ್ ಬೆಂಜ್ ಕಂಪನಿ ಕುಟುಂಬಸ್ಥರನ್ನು ಗುರಿಯಾಗಿಸಿಕೊಂಡು ಎಸ್ಯುವಿ ಹೆಸರಿನ ಮಾರ್ಕೊ ಪೋಲೊ ಎಂಬ ದೊಡ್ಡ ಗಾತ್ರದ ಕಾರನ್ನು ಮಾರುಕಟ್ಟೆಗೆ ತರಲಿದೆ ಎಂದಿದೆ.
ಮರ್ಸಿಡಿಸ್ ಬೆಂಜ್ ಮಾರ್ಕೊ ಪೋಲೊ ಕ್ಯಾಂಪರ್‌ನ ಮಾರಾಟ ಕಾರ್ಯನಿರ್ವಾಹಕ ಎಸ್. ರಿಕೇಶ್ ಮಾತನಾಡಿ, ಮಾರ್ಕೊ ಪೊಲೊ ಕಾರು ಕುಟುಂಬಸ್ಥರ ಸುದೀರ್ಘ ಪ್ರವಾಸಗಳನ್ನು ಪೂರೈಸಲು ನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ. ನಾಲ್ವರು ಈ ಕಾರನ್ನು ಬಳಸಬಹುದು. ಇದರಲ್ಲಿ ಹಾಸಿಗೆಗಳು, ಸ್ನಾನಗೃಹ, ಅಡುಗೆಮನೆ ಒಳಗೊಂಡಿರಲಿದೆ ಎಂದು ವಿವರಿಸಿದ್ದಾರೆ.
ಮಡಿಸಿದ ಕುರ್ಚಿಗಳು, ಡೇರೆಗಳನ್ನು ಈ ಕಾರಿನೊಳಗೆ ಇರಿಸಿಕೊಳ್ಳಬಹುದು. ಈ ಎಸ್ಯುವಿ ಹೊಂದಿರುವ ಜನರು ತಮ್ಮ ಬಿಡುವಿನ ವೇಳೆಯಲ್ಲಿ ಯಾವುದೇ ರೆಸಾರ್ಟ್ ಅನ್ನು ಕಾಯ್ದಿರಿಸುವ ಅಗತ್ಯವಿಲ್ಲ. ಏಕೆಂದರೆ, ಕಾರು ಸ್ವತಃ ರೆಸಾರ್ಟ್ ಮಾದರಿಯಲ್ಲಿದೆ. ಇದರ ಬೆಲೆ ₹ 1.46 ಕೋಟಿ!
ಇದು ಡೀಸೆಲ್ ರೂಪಾಂತರವಾಗಿದ್ದು, ಟ್ಯಾಂಕ್ 6.8 ಲೀಟರ್ ಡೀಸೆಲ್ ಸಾಗಿಸುವ ಸಾಮರ್ಥ್ಯ ಹೊಂದಿದೆ. ಗಿರಿಧಾಮಗಳಲ್ಲಿ ಪ್ರಯಾಣಿಸುವುದು ಸಹ ತುಂಬಾ ಸುಲಭ. ನೀರು ಸಂಗ್ರಹಕ್ಕೆ ಟ್ಯಾಂಕ್ ಹಾಗೂ ಬಳಸಿದ ನೀರು ಸಂಗ್ರಹಿಸಲು ಮತ್ತೊಂದು ಟ್ಯಾಂಕ್ ಹೊಂದಿದೆ. ಆರ್ ಸೀಟುಗಳಿಗೆ ವಿಸ್ತರಿಸಿಕೊಳ್ಳುವ ಆಯ್ಕೆಯನ್ನೂ ಕಂಪನಿ ನೀಡಿದೆ. 1950 ಸಿಸಿ ಡೀಸೆಲ್ ಎಂಜಿನ್ ಹೊಂದಿದೆ. 163 ಎಚ್ಪಿ ಹಾಗೂ 380 ನ್ಯೂಟನ್ ಮೀಟರ್ ಟಾರ್ಕ್ ಹೊಮ್ಮಿಸುವ ಸಾಮರ್ಥ್ಯವಿದೆ ಎಂದು ವಿವರಿಸಿದರು.