ಅಮರಾವತಿ : 'ಡಿಜಿಪಿ ಆಂಧ್ರಪ್ರದೇಶ' ಹೆಸರಿನೊಂದಿಗೆ ಅಪರಿಚಿತರು ಭಾನುವಾರ ಟ್ವಿಟರ್‌ನಲ್ಲಿ ನಕಲಿ ಖಾತೆ ತೆರೆದಿದ್ದಾರೆ. ಖಾತೆಯಲ್ಲಿ ಡಿಜಿಪಿ ಗೌತಮ್ ಸಾವಂಗ್ ಅವರ ಚಿತ್ರವನ್ನು ಡಿಪಿಯಾಗಿ ಇಟ್ಟುಕೊಂಡಿದ್ದಾರೆ. ಇದು ಆಂಧ್ರಪ್ರದೇಶ ಡಿಜಿಪಿಯ ಅಧಿಕೃತ ಖಾತೆ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಹಲವು ಟ್ವೀಟ್‌ಗಳನ್ನು ಸತತವಾಗಿ ಮಾಡಲಾಗಿತ್ತು. ನಕಲಿ ಖಾತೆ ಗುರುತಿಸುವ ಮೊದಲು ಹಲವು ಜಿಲ್ಲೆಗಳ ಎಸ್‌ಪಿಗಳು ಮತ್ತು ಇತರರು ಈ ಟ್ವಿಟರ್ ಖಾತೆ ಫಾಲೋ ಮಾಡಿದ್ದಾರೆ.
ಅದರಲ್ಲಿ ಮಾಡಿದ ಟ್ವೀಟ್‌ಗಳು ಅನುಮಾನಾಸ್ಪದವಾಗಿದ್ದು, ಅದನ್ನು ನಕಲಿ ಖಾತೆ ಎಂದು ಗುರುತಿಸಲಾಗಿದೆ. ವಿಷಯ ತಿಳಿದ ಕೂಡಲೇ ಪೊಲೀಸ್ ಪ್ರಧಾನ ಕಚೇರಿ ಟ್ವಿಟರ್‌ಗೆ ದೂರು ನೀಡಿ ಖಾತೆಯನ್ನು ಸ್ಥಗಿತಗೊಳಿಸಿದೆ.
ವಿಜಯವಾಡದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ನಕಲಿ ಖಾತೆ ಯಾವ ಐಪಿ ವಿಳಾಸದಲ್ಲಿ ತೆರೆದಿದ್ದಾರೆ ಎಂಬುದರ ಬಗ್ಗೆ ಪೊಲೀಸ್ ತನಿಖೆ ಆರಂಭವಾಗಿದೆ.