ನವದೆಹಲಿ: ಭಾರತದಲ್ಲಿ ವಾಟ್ಸ್ಆ್ಯಪ್ ಮತ್ತು ಫೇಸ್‌ಬುಕ್ ಅನ್ನು ಬಿಜೆಪಿ ಹಾಗೂ ಆರ್ಎಸ್ಎಸ್ ನಿಯಂತ್ರಿಸುತ್ತಿವೆ ಎಂದ ಸಂಸದ ರಾಹುಲ್ ಗಾಂಧಿ ಆರೋಪಕ್ಕೆ ಇಂದು ಫೇಸ್‌ಬುಕ್ ಇಂಡಿಯಾ ತನ್ನ ಪ್ರತಿಕ್ರಿಯೆ ನೀಡಿದೆ.
ಸಾಮಾಜಿಕ ಜಾಲತಾಣವು ತನ್ನ ಪ್ಲಾಟ್ಫಾರ್ಮ್ನಲ್ಲಿ ದ್ವೇಷದ ಭಾಷಣ/ಮಾತು ಮತ್ತು ಹಿಂಸಾಚಾರ ಪ್ರಚೋದಿಸುವ ವಿಷಯವನ್ನು ನಿಷೇಧಿಸುತ್ತದೆ. ಯಾವುದೇ ರಾಜಕೀಯ ಸಂಬಂಧವಿಲ್ಲದೆ ಈ ನೀತಿಗಳನ್ನು ಜಾಗತಿಕವಾಗಿ ಜಾರಿಗೊಳಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿಕೆಗೆ ಫೇಸ್‌ಬುಕ್ ಪ್ರತ್ಯುತ್ತರ ನೀಡಿದೆ.
ಜಾಗತಿಕ ಮಟ್ಟದಲ್ಲಿ ಭಾರತವು ಸಾಮಾಜಿಕ ಜಾಲತಾಣದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ಈ ಸಂಬಂಧ ಇಲ್ಲಿ ಇನ್ನೂ ಹೆಚ್ಚಿನದನ್ನು ನಾವು ಮಾಡಬೇಕಾಗಿದೆ ಎಂದು ಒಪ್ಪಿಕೊಂಡಿದೆ.
ಹಿಂಸಾಚಾರ ಪ್ರಚೋದಿಸುವಂತಹ ದ್ವೇಷದ ಮಾತು ಮತ್ತು ಸಂಗತಿಗಳನ್ನು ನಾವು ನಿಷೇಧಿಸುತ್ತೇವೆ. ಯಾವುದೇ ರಾಜಕೀಯ ಸ್ಥಾನಮಾನ ಅಥವಾ ಪಕ್ಷದ ಸಂಬಂಧವನ್ನು ಪರಿಗಣಿಸದೆ ನಾವು ಈ ನೀತಿಗಳನ್ನು ಜಾಗತಿಕವಾಗಿ ಜಾರಿಗೊಳಿಸುತ್ತೇವೆ. ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ ಎಂಬುದು ನಮಗೆ ತಿಳಿದಿದೆ. ಅದನ್ನು ಜಾರಿಗೊಳಿಸುವಲ್ಲಿ ಪ್ರಗತಿ ಸಾಧಿಸುತ್ತಿದ್ದೇವೆ. ನಿಯಮಿತ ಲೆಕ್ಕಪರಿಶೋಧನೆ ನಡೆಸಿ ನ್ಯಾಯಸಮ್ಮತತೆ ಮತ್ತು ನಿಖರತೆಯನ್ನು ಕಾಪಾಡುತ್ತೇವೆ ಎಂದು ಫೇಸ್‌ಬುಕ್ ವಕ್ತಾರರು ತಿಳಿಸಿದ್ದಾರೆ.
ಮತದಾರರ ಮೇಲೆ ಪ್ರಭಾವ ಬೀರುವುದಕ್ಕಾಗಿ ಸಾಮಾಜಿಕ ಜಾಲತಾಣಗಳ ವೇದಿಕೆಯ ಮೂಲಕ ಸುಳ್ಳು ಸುದ್ದಿ, ದ್ವೇಷವನ್ನು ಹರಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಭಾನುವಾರ ಗಂಭೀರ ಆರೋಪ ಮಾಡಿದ್ದರು.