ನವದೆಹಲಿ: ಉಚ್ಚಾಟಿತ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರನ್ನು ಮರುನೇಮಕ ಮಾಡುವಂತೆ ಆದೇಶ ನೀಡಿದ್ದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಆದೇಶವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿ ಶುಕ್ರವಾರ ತೀರ್ಪು ನೀಡಿತ್ತು. ಇದಕ್ಕೆ ಇಂದು ಸೈರಸ್ ಮಿಸ್ತ್ರಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಅನೇಕ ಅಪೂರ್ಣತೆಗಳನ್ನು ಹೊಂದಿರಬಹುದು. ಆದರೆ ಆಯ್ಕೆಮಾಡಿಕೊಂಡ ದಿಕ್ಕು, ನನ್ನ ಕಾರ್ಯಗಳ ಹಿಂದಿನ ಸಮಗ್ರತೆ ಮತ್ತು ಅವುಗಳ ಪರಿಣಾಮಗಳ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.
ಟಾಟಾ ಸನ್ಸ್ ಅವರೊಂದಿಗಿನ ವ್ಯಾಜ್ಯದ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದ ಅವರು ನಿರಾಶೆಗೊಂಡಿದ್ದಾಗಿ ಹೇಳಿದ್ದಾರೆ.
ಉಚ್ಚಾಟಿತ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರನ್ನು ಮರುನೇಮಕ ಮಾಡುವಂತೆ ಆದೇಶ ನೀಡಿದ್ದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಆದೇಶದ ವಿರುದ್ಧ ಸುಪ್ರೀಂಕೋರ್ಟ್, ಶುಕ್ರವಾರ ತಡೆಯೊಡ್ಡಿ ಅದನ್ನು ವಜಾಗೊಳಿಸಿತು. ಇತರೆ ವ್ಯಾಜ್ಯಗಳಿಗೆ ಮೇಲ್ಮನವಿ ಸಲ್ಲಿಸಲು ಟಾಟಾಗೆ ಅನುಮತಿ ನೀಡಿತು. ನ್ಯಾಯಾಲಯದ ಈ ತೀರ್ಪನ್ನು ಉದ್ಯಮಿ ದಿಗ್ಗಜ ರತನ್ ಟಾಟಾ ಸ್ವಾಗತಿಸಿದ್ದರು.
ಇದನ್ನೂ ಓದಿ: ಐಟಿ, ಉಕ್ಕು, ಫಾರ್ಮಾ ಮೇಲೆ ಗೂಳಿ ಸವಾರಿ: 1,280 ಅಂಕ ಜಿಗಿದು ಮತ್ತೆ 50 ಸಾವಿರಕ್ಕೆ ಮರಳಿದೆ ಸೆನ್ಸೆಕ್ಸ್
ಟಾಟಾ ಸನ್ಸ್ ಮಂಡಳಿಯು 2016ರ ಅಕ್ಟೋಬರ್‌ನಲ್ಲಿ ತನ್ನ ಅಂದಿನ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರನ್ನು ಕಂಪನಿಯ ಮಂಡಳಿಯಿಂದ ತೆಗೆದುಹಾಕುವ ನಿರ್ಧಾರವನ್ನು ಸುಪ್ರೀಂಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ.
ತನ್ನ 282 ಪುಟಗಳ ತೀರ್ಪಿನಲ್ಲಿ ನ್ಯಾಯಾಲಯವು 2019ರ ಡಿಸೆಂಬರ್‌ನ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣದ (ಎನ್‌ಸಿಎಲ್‌ಎಟಿ) ಆದೇಶವನ್ನು ವಜಾಗೊಳಿಸಿತು. ಎನ್ಸಿಎಲ್ಟಿ ಟಾಟಾ ಸನ್ಸ್ ಮಂಡಳಿಯಲ್ಲಿ ಮಿಸ್ತ್ರಿ ಅವರನ್ನು ಮರುನೇಮಕ ಮಾಡುವಂತೆ ಮತ್ತು ಪ್ರಸ್ತುತ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರ ನೇಮಕ ಕಾನೂನುಬಾಹಿರ ಎಂದಿತ್ತು.