ನವದೆಹಲಿ: ಫಾರ್ಚೂನ್ ಅಡುಗೆ ಎಣ್ಣೆಯ ಅದಾನಿ ವಿಲ್ಮಾರ್, ಭಾರತದ ಮಾಜಿ ಕ್ರಿಕೆಟ್ ನಾಯಕ ಸೌರವ್ ಗಂಗೂಲಿ ಅವರು ಸೌಮ್ಯ ಹೃದಯಾಘಾತಕ್ಕೆ ಒಳಗಾದ ಬಳಿಕ ತನ್ನ ಟಿವಿ ಜಾಹೀರಾತು ಪ್ರಸಾರವನ್ನು ತಾತ್ಕಾಲಿಕ ಅವಧಿವರೆಗೆ ನಿಲ್ಲಿಸುವುದಾಗಿ ತಿಳಿಸಿದೆ.
ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿರುವ ಬಿಸಿಸಿಐ ಮುಖ್ಯಸ್ಥರನ್ನು ಕೈಬಿಡುವುದಿಲ್ಲ. ತಾತ್ಕಾಲಿಕವಾಗಿ ಸ್ಥಗಿತವಾದ ವಾಣಿಜ್ಯ ಜಾಹೀರಾತು ಶೀಘ್ರದಲ್ಲೇ ಪ್ರಸಾರವಾಗಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
ಇದನ್ನೂ ಓದಿ: 2,303 ಕೋಟಿ ರೂ. ಫಾಸ್ಟ್ಟ್ಯಾಗ್ ಟೋಲ್ ಸಂಗ್ರಹ: ಡಿಸೆಂಬರ್ನಲ್ಲಿ 200 ಕೋಟಿ ರೂ. ಹೆಚ್ಚಳ
ಗಂಗೂಲಿ ಕಳೆದ ವಾರ ಲಘು ಹೃದಯಾಘಾತದಿಂದಾಗಿ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಗೆ ಒಳಗಾಗಬೇಕಾದರು. ಅವರ ಅನಾರೋಗ್ಯದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು ಕಂಪನಿಯ ಜಾಹೀರಾತನ್ನು ಟ್ರೋಲ್ ಮಾಡಿದ್ದರು.
ನಾವು ಸೌರವ್ ಅವರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಅವರು ನಮ್ಮ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಮುಂದುವರಿಯುತ್ತಾರೆ. ಅವರೊಂದಿಗೆ ಕುಳಿತು ಈ ಬಗ್ಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವವರೆಗೂ ನಾವು ನಮ್ಮ ಟಿವಿ ಜಾಹೀರಾತನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ. ಇದು ಅತ್ಯಂತ ದುರದೃಷ್ಟಕರ ಘಟನೆ. ಯಾರಿಗೂ ಈ ರೀತಿ ಸಂಭವಿಸಬಾರದಿತ್ತು ಎಂದು ಅದಾನಿ ವಿಲ್ಮಾರ್ನ ಆಂಗ್ಶು ಮಲ್ಲಿಕ್ ಹೇಳಿದ್ದಾರೆ.