ನವದೆಹಲಿ: ವೆಚ್ಚದ ತಗ್ಗಿಸುವಿಕೆ ಮತ್ತು ತನ್ನ ಉದ್ಯಮ ವಿಸ್ತರಣೆ ಘೋಷಣೆಯಾದ '2020 ಫಿಟ್ ಫಾರ್ ಗ್ರೋಥ್'ನ ಭಾಗವಾಗಿ ಸಂಸ್ಥೆಯು ಉದ್ಯೋಗಗಳ ಕಡಿತವನ್ನು ಮುಂದುವರಿಸುವುದಾಗಿ ಐಟಿ ಕಂಪನಿ ಕಾಗ್ನಿಜೆಂಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಕಂಪನಿಯು ಮುಂಬರುವ ತ್ರೈಮಾಸಿಕಗಳಲ್ಲಿ ವಿಶ್ವಾದ್ಯಂತ ಸುಮಾರು 10,000 -12,000 ಮಧ್ಯಮ ಹಾಗೂ ಮೇಲ್ಮಟ್ಟದ ಸಿಬ್ಬಂದಿ ತೆಗೆದುಹಾಕುವಂತಹ ಕಠಿಣ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದೆ.
ಈ ಉದ್ಯೋಗ ಕಡಿತದಿಂದ ಸುಮಾರು 5,000 ರಿಂದ 7,000 ನೌಕರರ ಮೇಲೆ ಪರಿಣಾಮ ಬೀರಲಿದೆ. ಕಂಪನಿಯ ಒಟ್ಟು ಸಿಬ್ಬಂದಿಯಲ್ಲಿ ಸುಮಾರು ಶೇ 2ರಷ್ಟು ಸಂಖ್ಯೆ ಕಡಿತವಾಗಲಿದೆ. ಸುಮಾರು 5,000 ಯುವ ನೌಕರರನ್ನು ಮರು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಇದೇ ವೇಳೆ ಕಂಪನಿ ಪ್ರಕಟಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಕಾಗ್ನಿಜೆಂಟ್ ಕಂಪನಿಯ ಜುಲೈ- ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆದಾಯವು ಶೇ 5ರಷ್ಟು ಏರಿಕೆಯಾಗಿದ್ದು, 4.25 ಬಿಲಿಯನ್ ಡಾಲರ್ಗೆ ತಲುಪಿದೆ. 2018ರ ಇದೇ ಅವಧಿಯಲ್ಲಿ 4.14 ಬಿಲಿಯನ್ ಡಾಲರ್ ಇತ್ತು.