ನವದೆಹಲಿ: 'ಚೀನೀ ಉತ್ಪನ್ನಗಳ ಬಹಿಷ್ಕಾರ ಭಾವನೆಯು ಸಾಮಾಜಿಕ ಮಾಧ್ಯಮದಲ್ಲಿ ಮಾತ್ರವೇ ಅಸ್ತಿತ್ವದಲ್ಲಿದೆ' ಎಂದು ಹೇಳುವ ಮೂಲಕ ಲಕ್ಷಾಂತರ ಭಾರತೀಯರ ಮನಸ್ಸು ನೋಯಿಸಿದ್ದ ಶಿಯೋಮಿ ಇಂಡಿಯಾದ ಉಪಾಧ್ಯಕ್ಷ/ ವ್ಯವಸ್ಥಾಪಕ ನಿರ್ದೇಶಕ ಮನು ಕುಮಾರ್ ಜೈನ್ ವಿರುದ್ಧ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ತೀವ್ರ ವಾಗ್ದಾಳಿ ನಡೆಸಿದೆ.
ಚೀನಾ ಸರಕುಗಳ ನಿಷೇಧವು ಸಾಮಾಜಿಕ ಮಾಧ್ಯಮದಲ್ಲಿ ಮಾತ್ರ ಅಸ್ತಿತ್ವದಲ್ಲಿದೆ ಮತ್ತು ಇದು ಒಂದು ಜನಸಮೂಹದ ಮನಸ್ಥಿತಿಯ ಫಲಿತಾಂಶ ಎಂದು ಜೈನ್ ಅವರು ಇತ್ತೀಚಿಗೆ ಹೇಳಿಕೆ ನೀಡಿದ್ದರು. ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ. ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಅವರು ಇದನ್ನು ಖಂಡಿಸಿ, ಮನು ಹೇಳಿಕೆ 'ಅತ್ಯಂತ ಸೂಕ್ಷ್ಮವಲ್ಲದ ಮತ್ತು ಅಗೌರವದ' ಹೇಳಿಕೆ ಎಂದಿದ್ದಾರೆ.
ಭಾರತೀಯ ಸೈನಿಕರ ವಿರುದ್ಧ ಚೀನಾ ತೋರಿದ ದೌರ್ಜನ್ಯದಿಂದ ಇಡೀ ದೇಶವೇ ದುಃಖಿತವಾಗಿದೆ. ಚೀನಾದ ವಿರುದ್ಧ ಅಸಮಾಧಾನಗೊಂಡಿರುವ ಸಮಯದಲ್ಲಿ ಮನು ಕುಮಾರ್ ಜೈನ್, ರಾಷ್ಟ್ರದ ಮನಸ್ಥಿತಿ ಕುಗ್ಗಿಸುವ ಮೂಲಕ ತನ್ನ ಚೀನೀ ಯಜಮಾನರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಖಂಡೇಲ್ವಾಲ್ ಹೇಳಿದ್ದಾರೆ.
ಜೈನ್ ಅವರು ಈ ನೆಲದ ವಾಸ್ತವತೆಯನ್ನು ಸಂಪೂರ್ಣವಾಗಿ ಮರೆತುಬಿಟ್ಟಂತೆ ತೋರುತ್ತದೆ. ವ್ಯಾಪಾರ ಲಾಭಕ್ಕಾಗಿ ಧೈರ್ಯಶಾಲಿ ಭಾರತೀಯ ಸೈನಿಕರ ತ್ಯಾಗ ಮತ್ತು ಹುತಾತ್ಮತೆಯನ್ನು ಬದಿಗಿಟ್ಟು ಸಂಪೂರ್ಣವಾಗಿ ಅವಮಾನಿಸುವಂತಿದೆ. ಕೋಟ್ಯಂತರ ಭಾರತೀಯರು ಚೀನಾ ಉತ್ಪನ್ನಗಳ ವಿರೋಧಿ ಭಾವನೆ ವ್ಯಕ್ತಪಡಿಸಿದ ಆಂದೋಲನಕ್ಕೆ ಅನೇಕ ಗಣ್ಯರು ಬೆಂಬಲ ನೀಡಿದ್ದಾರೆ ಎಂದಿದೆ.