ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಮತಾ ಬ್ಯಾನರ್ಜಿ ಅವರ ಚುನಾವಣಾ ಪ್ರಚಾರ ಸಭೆ, ಸಮಾವೇಶಗಳು ಮಾಧ್ಯಮಗಳಿಗಿಂತ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತವೆ. ಹೀಗಾಗಿ, ಎಲ್ಲ ಪಕ್ಷಗಳು ಸರ್ಚ್ ಎಂಜಿನ್ ದೈತ್ಯ ಗೂಗಲ್ನಲ್ಲಿ ಪೈಪೋಟಿಗೆ ಬಿದ್ದವರಂತೆ ಜಾಹೀರಾತು ನೀಡುತ್ತಿವೆ.
ಇಂಡಿಯನ್ ಟ್ರಾನ್ಸ್ಪರನ್ಸಿ ಸಂಸ್ಥೆ ಗುರುವಾರ ರಾಜಕೀಯ ಪಕ್ಷಗಳ ಜಾಹೀರಾತಿಗೆ ಸಂಬಂಧಿಸಿದ ವರದಿಯೊಂದನ್ನು ಬಿಡುಗಡೆ ಮಾಡಿದೆ. ಫೆಬ್ರವರಿ ತಿಂಗಳಿಂದ ವಿನಿಯೋಗಿಸಿದ ಹಣದ ಮೇಲೆ ಈ ವರದಿ ತಯಾರಿಸಿದ್ದು, ಬಿಜೆಪಿ ನಂ.1 ಸ್ಥಾನ ಪಡೆದಿದೆ.
ಪ್ರಾದೇಶಿಕ ಪಕ್ಷಗಳಾದ ಆಂಧ್ರಪ್ರದೇಶದ ಜಗನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ₹ 1.04 ಕೋಟಿ ಹಾಗೂ ಸಿಎಂ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ₹ 85.25 ಲಕ್ಷ ತೊಡಗಿಸಿದ್ದಾರೆ.
ನಾಯ್ಡು ಮತ್ತು ಪಕ್ಷದ ಅಭ್ಯರ್ಥಿಗಳ ಪರವಾಗಿ ಡಿಜಿಟಲ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ₹ 63.43 ಲಕ್ಷ ಹಾಗೂ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪಮ್ಮಿ ಸಾಯಿ ಚರಣ್ ರೆಡ್ಡಿ ಅವರು ₹ 26,400 ಖರ್ಚು ಮಾಡಿದ್ದಾರೆ. ಜಾಹೀರಾತು ನೀಡಿದ ಒಟ್ಟು 11 ಪಕ್ಷಗಳಲ್ಲಿ ನಿಯಮ ಉಲ್ಲಂಘಿಸಿದ 4 ಪಕ್ಷಗಳ ಜಾಹೀರಾತುಗಳನ್ನು ಗೂಗಲ್ ನಿರ್ಬಂಧಿಸಿದೆ ಎಂದು ವರದಿ ತಿಳಿಸಿದೆ.
: