ನವದೆಹಲಿ: 'ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್' ವಾಟ್ಸ್ಆ್ಯಪ್ನಲ್ಲೇ ಉಳಿತಾಯ ಖಾತೆ ತೆರೆಯುವ ಪ್ರಕ್ರಿಯೆ ಸೇವೆಯನ್ನು ಆರಂಭಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸುಧಾರಿತ ಮಲ್ಟಿ ಚಾನೆಲ್ ಸಂಭಾಷಣೆ ಮತ್ತು ಕಂಪ್ಯೂಟರ್ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ಕರಿಕ್ಸ್ ಮೊಬೈಲ್ ಈ ಸೇವೆ ಒದಗಿಸುತ್ತಿದೆ. 'ಎಯು ಬ್ಯಾಂಕ್'ನ ಆಸಕ್ತ ಗ್ರಾಹಕರು ತಮ್ಮ ವಾಟ್ಸ್ಆ್ಯಪ್ನಲ್ಲಿ ಸಂವಾದಾತ್ಮಕ ಚಾಟ್ ತರಹದ ಇಂಟರ್ಫೇಸ್ ಬಳಸಿ ಉಳಿತಾಯ ಖಾತೆ ತೆರೆಯ ಬಹುದಾಗಿದೆ ಎಂದಿದೆ.
ಹಣಕಾಸು ಸೇವೆಗಳ ವಿಸ್ತರಣೆಯ ಭಾಗವಾಗಿ ಎಯು ಬ್ಯಾಂಕ್ ಇದನ್ನು ಆರಂಭಿಸಿದ್ದು, ಜಟಿಲವಲ್ಲದ ಬ್ಯಾಂಕಿಂಗ್ ಅನುಭವಗಳನ್ನು ಸರಳವಾಗಿ ಗ್ರಾಹಕರ ಹತ್ತಿರ ಕೊಂಡೊಯ್ಯಲು ಇದು ನೆರವಾಗಲಿದೆ. ವಾಟ್ಸ್ಆ್ಯಪ್ನಲ್ಲಿ ಆರಂಭಿಸಲಾಗುತ್ತಿರುವ ಹಲವು ಸಂವಾದಾತ್ಮಕ ಸೇವೆಗಳಲ್ಲಿ ಇದು ಕೂಡ ಒಂದು ಎಂದು ಪ್ರಕಟಣೆಯಲ್ಲಿ ಹೇಳಿದೆ.
ವಾಟ್ಸ್ಆ್ಯಪ್ ಪ್ರಪಂಚದಾದ್ಯಂತ ಜನರ ದೈನಂದಿನ ಜೀವನದ ಭಾಗವಾಗಿದೆ. ಇದು ಬಳಕೆದಾರ ಸ್ನೇಹಿಯಾಗಿದ್ದು, ಹಲವು ವೈಶಿಷ್ಟ್ಯಗಳ ಸೇವೆಗಳನ್ನು ನೀಡುತ್ತಿದೆ. ಡಿಜಿಟಲ್ ಮಾಧ್ಯಮದ ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ಸರಳೀಕರಿಸುವ ಧ್ಯೇಯದೊಂದಿಗೆ ಈ ಯೋಜನೆಗೆ ಮುಂದಾಗಿದ್ದೇವೆ ಎಂದು ಬ್ಯಾಂಕ್ನ ಎಂಡಿ ಮತ್ತು ಸಿಇಒ ಸಂಜಯ್ ಅಗರ್ವಾಲ್ ಹೇಳಿದ್ದಾರೆ.