ವಾಷಿಂಗ್ಟನ್: ಮತ್ತೊಂದು ಟೆಕ್ ದೈತ್ಯ ಆ್ಯಪಲ್ ಭಾರತದಲ್ಲಿ ಕೊರೊನಾ ವೈರಸ್ ತಂದೊಡ್ಡಿದ ಬಿಕ್ಕಟ್ಟಿಗೆ ಸ್ಪಂದಿಸಿದೆ. ಕಷ್ಟದ ಸಮಯದಲ್ಲಿ ಭಾರತೀಯರಿಗೆ ಸಹಾಯ ಮಾಡಲು ಮುಂದೆ ಬಂದಿದೆ. ಕಂಪನಿಯ ಸಿಇಒ ಟಿಮ್ ಕುಕ್ ಅವರು ಸಾಂಕ್ರಾಮಿಕ ತಡೆಗಟ್ಟುವ ಚಟುವಟಿಕೆಗಳಿಗೆ ದೇಣಿಗೆ ರೂಪದಲ್ಲಿ ಕೊಡುಗೆ ನೀಡುವುದಾಗಿ ಘೋಷಿಸಿದ್ದಾರೆ.
ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ವೈದ್ಯರು, ಕಾರ್ಮಿಕರು ಮತ್ತು ಆ್ಯಪಲ್ ಕುಟುಂಬ ಸೇರಿದಂತೆ ಈ ಭಯಾನಕ ಸಾಂಕ್ರಾಮಿಕ ರೋಗ ಎದುರಿಸುತ್ತಿರುವ ಪ್ರತಿಯೊಬ್ಬರ ಬಗ್ಗೆ ನಮಗೆ ಕಾಳಜಿಯಿದೆ. ಕ್ಷೇತ್ರ ಮಟ್ಟದಲ್ಲಿನ ಪ್ರಯತ್ನಗಳಿಗೆ ಬೆಂಬಲವಾಗಿ ಆ್ಯಪಲ್ ದೇಣಿಗೆ ನೀಡಲಿದೆ ಎಂದು ಟಿಮ್ ಕುಕ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಆದ್ರೆ ಯಾವ ರೂಪ ಮತ್ತು ಎಷ್ಟು ಸಹಾಯ ಮಾಡಲಿದ್ದಾರೆ ಎಂಬ ಬಗ್ಗೆ ಬಹಿರಂಗಪಡಿಸಿಲ್ಲ.
ಎನ್ಜಿಒಗಳಿಗೆ ಅಥವಾ ಸರ್ಕಾರಕ್ಕೆ ನೇರವಾಗಿ ದೇಣಿಗೆ ನೀಡುವ ಬಗ್ಗೆ ವಿವಿಧ ಗುಂಪುಗಳೊಂದಿಗೆ ಸಮಾಲೋಚನೆ ನಡೆಯುತ್ತಿದೆ ಎಂಬ ಮಾಹಿತಿ.
ಇದಕ್ಕೂ ಮೊದಲು ಭಾರತ ಮೂಲದ ಟೆಕ್ ಕಂಪನಿಗಳ ಸಿಇಒಗಳು ಭಾರತದ ಕೊರೊನಾ ಪರಿಸ್ಥಿತಿಗೆ ಕಳವಳ ವ್ಯಕ್ತಪಡಿಸಿದ್ದರು. ಮಾತೃಭೂಮಿಗೆ ನೆರವಾಗಲು ಮುಂದೆ ಬಂದರು. ಗೂಗಲ್‌ನ ಸಿಇಒ ಸುಂದರ್ ಪಿಚೈ ಅವರು ಗೂಗಲ್ ಪರವಾಗಿ 135 ಕೋಟಿ ರೂ. ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಭಾರತದ ಪರಿಸ್ಥಿತಿಯಿಂದ ಎದೆಗುಂದಿದಂತಾಗಿದೆ ಎಂದು, ಪರಿಹಾರ ಕಾರ್ಯಗಳಿಗೆ ಸಹಾಯ ಮಾಡಲು ಆಮ್ಲಜನಕ ಸಾಂದ್ರತೆಯ ಯಂತ್ರಗಳ ಖರೀದಿ ಬಗ್ಗೆ ಪ್ರಕಟಿಸಿದ್ದಾರೆ.