ಮುಂಬೈ: ಕರ್ನಾಟಕ ಮೂಲದ ಬಾಲಿವುಡ್ ಬೆಡಗಿ ಐಶ್ವರ್ಯ ರೈ ಬಚ್ಚನ್ ಮತ್ತು ಅವರ ತಾಯಿ ವೃಂದಾ ಕೆ.ಆರ್. ಅವರು ಬೆಂಗಳೂರು ಮೂಲದ ಪರಿಸರ (ಎನ್ವಿರಾನ್ಮೆಂಟ್) ಸಂರಕ್ಷಣೆಯ 'ಅಂಬೇ ಸ್ಟಾರ್ಟ್ಅಪ್'ನಲ್ಲಿ ಬಂಡವಾಳ ಹೂಡಿದ್ದಾರೆ.
ಅಂಬೇ ಸ್ಟಾರ್ಟ್ ಅಪ್ ದತ್ತಾಂಶಗಳನ್ನು ಬಳಸಿಕೊಂಡು ಗಾಳಿಯ ಗುಣಮಟ್ಟದಂತಹ ಮಾಪನ ಅಳೆಯಲು ನೆರವಾಗುತ್ತದೆ. ಪರಿಸರ ಮಾಲಿನ್ಯ ಹಂತವನ್ನು ಪತ್ತೆಹಚ್ಚುವ ಈ ಸ್ಟಾರ್ಟ್ ಅಪ್ ಮೇಲೆ ಐಶ್ವರ್ಯ ಹಾಗೂ ಅವರ ತಾಯಿ ಸೇರಿ 1 ಕೋಟಿ ರೂ. ಬಂಡವಾಳ ಹೂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಬಚ್ಚನ್ ಕುಟುಂಬಸ್ಥರಿಂದ ಪ್ರಥಮ ಬಾರಿಗೆ ಏಂಜೆಲ್ ಹೂಡಿಕೆಯಲ್ಲಿ ಐಶ್ವರ್ಯ ರೈ ಅವರು ತೊಡಗಿಸಿಕೊಂಡಿದ್ದಾರೆ. ದಶಕದ ಹಿಂದೆ ಮಹಾರಾಷ್ಟ್ರದ ಪವನ ವಿದ್ಯುತ್ ಯೋಜನೆಗಳಲ್ಲಿ ಇದೇ ರೀತಿಯ ಹೂಡಿಕೆ ಮಾಡಿದ್ದರು ಎನ್ನಲಾಗುತ್ತಿದೆ.
ಈ ಸ್ಟಾರ್ಟ್ಅಪ್ನ ಒಟ್ಟು ಹೂಡಿಕೆಯ ಮೊತ್ತ ₹ 3.22 ಕೋಟಿಯಷ್ಟಿದ್ದು, ಇದರಲ್ಲಿ ವೃಂದಾ ಹಾಗೂ ಐಶ್ವರ್ಯ ಅವರು ತಲಾ ₹ 50 ಲಕ್ಷ ತೊಡಗಿಸಿದ್ದಾರೆ. 2017ರಲ್ಲಿ ಆಟೋಮೋಟಿವ್ ಎಂಜಿನಿಯರ್ ಜೋಶಿ, ವಕೀಲ ಜೈದೀಪ್ ಸಿಂಗ್ ಮತ್ತು ಡೇಟಾ ವಿಜ್ಞಾನಿ ಮಧುಸೂದನ್ ಆನಂದ್ ಅವರು 'ಅಂಬೇ ಸ್ಟಾರ್ಟ್ ಅಪ್' ಸ್ಥಾಪಿಸಿದ್ದರು.