ನವದೆಹಲಿ: ಬಾಲ್ಕೋಟ್ ಏರ್ಸ್ಟ್ರೈಕ್ ಬಳಿಕ ಭಾರತೀಯ ವಿಮಾನಗಳಿಗೆ ಪಾಕಿಸ್ತಾನ ವಾಯು ಗಡಿ ಪ್ರವೇಶಕ್ಕೆ ನಿರ್ಬಂಧ ಹೇರಿದ ಬಳಿಕ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾಗೆ ₹ 430 ಕೋಟಿ ನಷ್ಟವಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ರಾಜ್ಯಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಏರ್ ಸ್ಟ್ರೈಕ್ ದಾಳಿಯ ನಂತರ ನಾಲ್ಕು ತಿಂಗಳ ಅವಧಿಯವರೆಗೂ ಜಾರಿಯಲ್ಲಿದ್ದ ಪಾಕ್ ವಾಯು ಗಡಿ ನಿಷೇಧದಿಂದ ಏರ್ ಇಂಡಿಯಾಗೆ ₹ 430 ಕೋಟಿ ನಷ್ಟವಾಗಿದೆ ಎಂದರು.
ರಾಷ್ಟ್ರೀಯ ಸಾರಿಗೆ ಸಂಸ್ಥೆಯಾದ ಏರ್ ಇಂಡಿಯಾ, ಖಾಸಗೀಕರಣಗೊಳಿಸಲು ಸರ್ಕಾರ ಬದ್ಧವಾಗಿದೆ. ಆದರೆ, ಅದನ್ನು ಖಾಸಗೀಕರಣಗೊಳಿಸುವ ಮೊದಲು ಲಾಭದಾಯಕವಾಗಿಸುವ ಮಹತ್ವದ ಯೋಜನೆಯನ್ನು ರೂಪಿಸುತ್ತಿದ್ದೇವೆ. ವಿಮಾನಯಾನ ನಿರ್ವಹಣೆಯ ವೆಚ್ಚದಲ್ಲಿ ಶೇ 40ರಷ್ಟು ಇಂಧನ ಮತ್ತು ಇತರೆ ಭೌಗೋಳಿಕ- ರಾಜಕೀಯದಿಂದ ಕೂಡಿದೆ. ಪಾಕ್ ತನ್ನ ವಾಯು ಗಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಸಂಸ್ಥೆಗೆ ಬಹಳ ನಷ್ಟ ಉಂಟಾಗಿದೆ ಎಂದು ವಿವರಿಸಿದರು.
ಈ ವರ್ಷ್ಯಾಂತ್ಯದ ವೇಳೆಗೆ ನಷ್ಟದ ಪ್ರಮಾಣವನ್ನು ₹ 74 ಕೋಟಿ ತಗ್ಗಿಸಿ ಮುಂದಿನ ವರ್ಷದಲ್ಲಿ ವಿಮಾನಯಾನವನ್ನು ಲಾಭದತ್ತ ಕೊಂಡೊಯ್ಯುವ ನಿರೀಕ್ಷೆ ಇರಿಸಿಕೊಂಡಿದ್ದೇವೆ. ಖಾಸಗೀಕರಣದ ಬಳಿಕ ಏರ್ ಇಂಡಿಯಾ ಪೈಲಟ್‌ಗಳ ಉದ್ಯೋಗ ಖಾತರಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪುರಿ, ಸಂಸ್ಥೆಯಲ್ಲಿ ಕಾರ್ಯನಿರತ ಪೈಲಟ್‌ಗಳು ಒಪ್ಪಂದದ ಮತ್ತು ಖಾಯಂ ಉದ್ಯೋಗಿಗಳು ತಮ್ಮ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಭರವಸೆ ನೀಡಿದರು.
ಏರ್ ಇಂಡಿಯಾದಲ್ಲಿ ಒಟ್ಟು 1,677 ಉದ್ಯೋಗಿಗಳಿದ್ದು, ಇದರಲ್ಲಿ 1,108 ಮಂದಿ ಖಾಯಂ ಉದ್ಯೋಗಿಗಳು ಮತ್ತು 569 ಮಂದಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಖಾಲಿ ಹುದ್ದೆಗಳ ಭರ್ತಿಗೆ ಜಾಹೀರಾತು ಮೂಲಕ ಆಹ್ವಾನಿಸಲಾಗಿತ್ತು ಎಂದರು.