ನವದೆಹಲಿ: ನೀವೇನಾದ್ರ ನಿದ್ದೆ ಪ್ರಿಯರಾ? ಹಾಗಿದ್ರೆ ನಿಮಗೊಂದು ಭರ್ಜರಿಯಾದ ಉದ್ಯೋಗಾವಕಾಶವನ್ನು ನೀಡೋದಕ್ಕೆ ಸಿದ್ಧವಾಗಿದೆ ಸ್ಟಾರ್ಟ್ಅಪ್ ಕಂಪನಿಯೊಂದು.
ಹಾಸಿಗೆಗಳನ್ನು ಉತ್ಪಾದಿಸುವ ಸ್ಲೀಪ್ ಸೊಲ್ಯೂಷನ್ಸ್ ಸ್ಟಾರ್ಟ್ಅಪ್ 'ವೇಕ್ಫಿಟ್.ಕೊ' (Wakefit.co) ಕಂಪನಿಯು ಸ್ಲೀಪ್ ಇಂಟರ್ನ್‌ಶಿಪ್ ಅವಧಿಯಲ್ಲಿ ಅಭ್ಯರ್ಥಿಗಳು ನಿತ್ಯ 9 ಗಂಟೆಯಂತೆ 100 ದಿನಗಳವರೆಗೆ ನಿದ್ದೆ ಮಾಡಿದರೆ 1 ಲಕ್ಷ ರೂ. ನೀಡಲಿದೆ.
ಜೀವನದಲ್ಲಿ ನಿದ್ರೆಯನ್ನೇ ಆದ್ಯತೆಯನ್ನಾಗಿ ಮಾಡಿಕೊಂಡ ದೇಶದ ಅತ್ಯುತ್ತಮ ಸ್ಲೀಪರ್‌ಗಳನ್ನು ನೇಮಕ ಮಾಡಿಕೊಳ್ಳಲು ಎದುರುನೋಡುತ್ತಿದ್ದೇವೆ. ಸ್ಲೀಪ್ ಇಂಟರ್ನ್ಶಿಪ್ನ ಉದ್ದೇಶವು ಆರೋಗ್ಯದ ಮೇಲೆ ನಿದ್ರೆಯು ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಸಲು ಹಾಗೂ ಚೆನ್ನಾಗಿ ನಿದ್ರೆ ಮಾಡುವ ಗೀಳು ಹೊಂದಿರುವ ಜನರನ್ನು ಉತ್ತೇಜಿಸಲು ಇಂತಹ ಅಭಿಯಾನ ಆರಂಭಿಸಲಾಗಿದೆ ಎನ್ನುತ್ತಾರೆ ವೇಕ್‌ಫಿಟ್.ಕೊ ನಿರ್ದೇಶಕ ಮತ್ತು ಸಹ ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ.
ಪ್ರಶಿಕ್ಷಣಾರ್ಥಿಗಳು ಹಾಸಿಗೆಯ ಮೇಲೆ ಮಲಗಬೇಕು. ಈ ವೇಳೆ ಕೌನ್ಸೆಲಿಂಗ್ ಸೆಷನ್, ಸ್ಲೀಪ್ ಟ್ರ್ಯಾಕರ್ ಅನ್ನು ಮಾಡಲಾಗುತ್ತದೆ. ಹಾಸಿಗೆಯನ್ನು ಬಳಸುವ ಮೊದಲು ಮತ್ತು ನಂತರ ಸ್ಲೀಪಿಂಗ್ ಇಂಟರ್ನ್‌ಶಿಪ್ ಅನ್ನು ವೇಕ್‌ಫಿಟ್ ಒಬ್ಬರ ನಿದ್ರೆಯ ಮಾದರಿಯನ್ನು ಮೇಲ್ವಿಚಾರಣೆ ಮಾಡುತ್ತಾರೆ. ಆದರೆ, ಇಂಟರ್ನ್ಶಿಪ್ಗಳಿಗೆ ಒಂದು ಷರತ್ತು ವಿಧಿಸಲಾಗಿದೆ. ಅವರು ಕೆಲಸದ ಸಮಯದಲ್ಲಿ ಲ್ಯಾಪ್‌ಟಾಪ್ ಬಳಸುವಂತಿಲ್ಲ.
100 ದಿನಗಳವರೆಗೆ ನಿತ್ಯ ಒಂಬತ್ತು ಗಂಟೆಗಳವರೆಗೆ ನಿದ್ದೆ ಮಾಡಿದ ಡೇಟಾವನ್ನು ನೀಡಿದ ಬಳಿಕ ಕಂಪನಿಯು ₹ 1 ಲಕ್ಷ ಸ್ಟೈಫಂಡ್ ನೀಡುತ್ತದೆ. ಇದು ವೃತ್ತಿ ಜೀವನದಲ್ಲಿ ಕೆಲಸ ಮತ್ತು ಬದುಕಿನ ಸಮತೋಲನ ಕಾಪಾಡಿಕೊಳ್ಳುವಲ್ಲಿ ನಿದ್ರೆಯು ಅವಿಭಾಜ್ಯ ಅಂಗವಾಗಿಸುವ ಹೆಜ್ಜೆಯಾಗಿದೆ ಎಂದು ರಾಮಲಿಂಗೇಗೌಡ ತಿಳಿಸಿದರು.