ನವದೆಹಲಿ: ರಾಷ್ಟ್ರವ್ಯಾಪಿ ಲಾಕ್‌ಡೌನ್ ವೇಳೆ ತವರಿಗೆ ಮರಳಿದ ಲಕ್ಷಾಂತರ ವಲಸೆ ಕಾರ್ಮಿಕರ ಪೈಕಿ ಸುಮಾರು 9 ಲಕ್ಷಕ್ಕೂ ಅಧಿಕ ಕಾರ್ಮಿಕರಿಗೆ ನೆರವಾಗುವಂತಹ 160ಕ್ಕೂ ಹೆಚ್ಚು ಯೋಜನೆಗಳನ್ನು ಭಾರತೀಯ ರೈಲ್ವೆ ಗುರುತಿಸಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ಹೇಳಿದರು.
ದೇಶಾದ್ಯಂತ ಕೋವಿಡ್ -19 ಪರಿಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ಮುಂದಿನ ದಿನಗಳಲ್ಲಿ ಭಾರತೀಯ ರೈಲ್ವೆಗೆ ಎಲ್ಲಾ ರೈಲುಗಳನ್ನು ಓಡಿಸಲು ಸಾಧ್ಯವಾಗದಿರಬಹುದು ಎಂದಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಧ್ಯಮಗಳ ಜತೆ ಸಂವಾದ ನಡೆಸಿದ ಅವರು, ಇದುವರೆಗೆ ರೈಲ್ವೆಗೆ ಕೇಂದ್ರವು ಕೋವಿಡ್ ನಿಧಿಯಿಂದ 620 ಕೋಟಿ ರೂ. ಬಿಡುಗಡೆ ಮಾಡಿದೆ. ಗರೀಬ್ ಕಲ್ಯಾಣ ರೋಜಗಾರ್ ಅಭಿಯಾನದ ಅಡಿಯಲ್ಲಿ ಆರೇ ದಿನಗಳಲ್ಲಿ 9 ಲಕ್ಷ ವಲಸೆ ಕಾರ್ಮಿಕರು ಕೆಲಸ ಮಾಡುವಂತಹ 160 ಯೋಜನೆಗಳನ್ನು ಗುರುತಿಸಲಾಗಿದೆ ಎಂದರು.
ಕೆಲಸದ ಸ್ಥಳಗಳಲ್ಲಿ ಸಿಲುಕಿಬಿದ್ದ ವಲಸೆ ಕಾರ್ಮಿಕರ, ವಿದ್ಯಾರ್ಥಿಗಳ, ಯಾತ್ರಾರ್ಥಿಗಳ ಮತ್ತು ಪ್ರವಾಸಿಗರ ಪ್ರಯಾಣಕ್ಕೆ ರೈಲ್ವೆ ಮಂಡಳಿಯು ಮೇ 1ರಿಂದ ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಿದೆ. ಮೇ 1ರಿಂದ ದೇಶಾದ್ಯಂತ 65 ಲಕ್ಷ ಕಾರ್ಮಿಕರನ್ನು 4,500ಕ್ಕೂ ಅಧಿಕ ಶ್ರಮಿಕ್ ವಿಶೇಷ ರೈಲುಗಳಲ್ಲಿ ಸಾಗಿಸಲಾಗಿದೆ.
ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳದಿಂದ ದೊಡ್ಡ ನಗರಗಳಿಗೆ ರೈಲುಗಳಲ್ಲಿ ಉದ್ಯೋಗವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದು ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂಬುದನ್ನು ಸೂಚಿಸುತ್ತದೆ. ನಾವು ವಿಶೇಷ ರೈಲುಗಳ ಮೇಲೆ ನಿಗಾ ಇಡುತ್ತಿದ್ದೇವೆ. ಶೀಘ್ರದಲ್ಲೇ ಬೇಡಿಕೆ ಮತ್ತು ಕೋವಿಡ್ ಪರಿಸ್ಥಿತಿಯ ಆಧಾರದ ಮೇಲೆ ಅಂತಹ ಹೆಚ್ಚಿನ ರೈಲುಗಳನ್ನು ಪ್ರಾರಂಭಿಸಲಾಗುವುದು ಎಂದರು.
ದೇಶಾದ್ಯಂತ ಕೋವಿಡ್ -19 ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ರೈಲ್ವೆಗೆ ಮುಂದಿನ ದಿನಗಳಲ್ಲಿ ಎಲ್ಲಾ ರೈಲುಗಳನ್ನು ಓಡಿಸಲು ಸಾಧ್ಯವಾಗದಿರಬಹುದು ಎಂದು ಯಾದವ್ ಹೇಳಿದ್ದಾರೆ.