ನವದೆಹಲಿ: ಖಾಸಗಿ ವಿಮಾನಯಾನ ಸಂಸ್ಥೆ ವಿಸ್ತಾರಾ ಹಾಗೂ ಸಿಂಗಪುರ ಏರ್ಲೈನ್ಸ್ ವಾಣಿಜ್ಯ ಸಹಕಾರ ಒಪ್ಪಂದಕ್ಕೆ ಸಹಿ ಮಾಡಿದ್ದು, ಈ ಮೂಲಕ ಎರಡೂ ವಿಮಾನಯಾನ ಸಂಸ್ಥೆಗಳು ವಾಣಿಜ್ಯ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನೀಡಲಿವೆ.
ಈ ಒಪ್ಪಂದದ ಪ್ರಕಾರ ಎರಡೂ ವಿಮಾನಯಾನ ಸಂಸ್ಥೆಗಳು ತಮ್ಮ ಸಹಭಾಗಿತ್ವವನ್ನು ಬಲಪಡಿಸಿಕೊಳ್ಳಲಿದ್ದು ಮಾರ್ಕೆಟಿಂಗ್, ಶುಲ್ಕ, ಗ್ರಾಹಕ ಸೇವೆಗಳು ಮತ್ತು ಮುಂತಾದ ವಿಚಾರಗಳಲ್ಲಿ ತಮ್ಮ ಗ್ರಾಹಕರಿಗೆ ತಡೆರಹಿತ ಸೇವೆಗಳನ್ನು ನೀಡಲು ಪರಸ್ಪರ ಅನುವು ಮಾಡಿಕೊಡಲಿವೆ.
ವಿಸ್ತಾರಾ ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಸಿಂಗಪುರ ಏರ್ಲೈನ್ಸ್ನ ಜಂಟಿ ಉದ್ಯಮವಾಗಿದ್ದು, ಈ ಒಪ್ಪಂದವು ಸಿಂಗಪುರದಲ್ಲಿ 2017ರಲ್ಲಿ ಜಾರಿಗೆ ಬಂದ ಒಪ್ಪಂದವೊಂದರ ವಿಸ್ತರಣೆಯಾಗಿದೆ ಎಂದು ವಿಸ್ತಾರಾ ಮಾಹಿತಿ ನೀಡಿದೆ.
ಇದನ್ನೂ ಓದಿ: ಲಾಕ್ಡೌನ್ ಸಂಕಷ್ಟ: ನೌಕರರ ವೇತನ ಕಡಿತ ಘೋಷಿಸಿದ ''ವಿಸ್ತಾರಾ''
ಸಿಂಗಪುರ ಏರ್ಲೈನ್ಸ್ ಹಾಗೂ ವಿಸ್ತಾರಾ ನಡುವೆ ಈ ಒಪ್ಪಂದದಿಂದಾಗಿ ಸಿಂಗಪುರ ಮತ್ತು ಭಾರತದ ನಡುವಿನ ಸಂಬಂಧದ ಜೊತೆಗೆ ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಪ್ರಮುಖ ಪ್ರದೇಶಗಳಲ್ಲಿ ಹೆಚ್ಚಿನ ಕಾರ್ಯಾಚರಣೆ ಮಾಡಲು ಸಹಕಾರಿಯಾಗುತ್ತದೆ.
ಈಗಾಗಲೇ ಕೊರೊನಾ ಕಾರಣದಿಂದಾಗಿ ವಿಮಾನಯಾನ ಉದ್ಯಮವು ಸಂಕಷ್ಟಕ್ಕೆ ಸಿಲುಕಿದ್ದು, ಈ ಒಪ್ಪಂದದಿಂದ ಎರಡೂ ವಿಮಾನಯಾನ ಸಂಸ್ಥೆಗಳು ಚೇತರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಅಂದಾಜು ಮಾಡಲಾಗಿದೆ.